Thank you for visiting...

Sunday, April 5, 2009

ಮರೆಯುವ ಮುನ್ನ...

ಹೊಸ ವರುಷವ ಹೊಸ ಹರುಷವ ಮರಳಿ ಮರಳಿ ತರುತಿದೆ...
ಯುಗ ಯುಗಾದಿ ಕಳೆದರೂ...

‘ಪ್ರಕೃತಿ’ಯ ಓದುಗರಿಗೆಲ್ಲಾ... ಯುಗಾದಿ ಹಬ್ಬದ ಶುಭಾಶಯಗಳು.
- - - - - - - - - - - - - - - - - - - - - -ಹೊಸ ದಿನ... ಹೊಸ ಗಾಳಿ... ಹೊಸ ಆಫೀಸು... ಹೊಸ ಟ್ರಾಫಿಕ್... ಹೊಸ ಜನ-ಜೀವನ... ಅವನಿಗೆ ಹಳೆಯದೆಲ್ಲವೂ ಮತ್ತೊಮ್ಮೆ ಹೊಸದಾಗಿ ಆಗಲೇ ತಿಂಗಳುಗಳು ಸರಿದಿದೆ. ಅಲ್ಲಿ ಅಂದು ಕಾಲಚಕ್ರದ ಸುಳಿಯಲ್ಲಿ ಹೊಸಹಾದಿ ಕಂಡಾಗ, ಕಂಫರ್ಟ್ ಝೊನಿನ, ಐಷಾರಾಮದ(?) ಆ ಬದುಕಿಗೊಂದು ವಿದಾಯ ಹೇಳಿ ಬಂದಿದ್ದಾನೆ. ಅವನ ಬದುಕು ಮತ್ತೊಮ್ಮೆ ಬದಲಾಗುತ್ತಿದೆ.

ಚಳಿ, ಗಾಳಿ, ಮಳೆ, ಬಿಸಿಲು, ಅದೇನೇ ಇದ್ದರೂ "ಗುಡ್ ವೆದರ್" "ಬ್ಯಾಡ್ ವೆದರ್" "ಸನ್ ಹ್ಯಾಸ್ ಕಮ್ ಔಟ್ ಟುಡೈ" ಎಂಬ ಅಲ್ಲಿನ ಅನುದಿನದ ಮಂತ್ರಗಳು ಈಗ ಮರೆತು ಹೋಗಿದೆ. ರೆಸ್ಟೋರೆಂಟಿನಲ್ಲಿ "ನೊ ಮೀಟ್, ನೋ ಚಿಕನ್" ಎಂದು ಒತ್ತಿ ಹೇಳುವ ಅನಿವಾರ್ಯತೆ ಈಗಿಲ್ಲ. ಅಲ್ಲಿನ ಮೈ ಕೊರೆವ ಚಳಿಯಲ್ಲಿ ಕಾಡುತ್ತಿದ್ದ "ಬೇಕಿತ್ತಾ ಈ ಜೀವನ" ಅನ್ನೋ ಪ್ರಶ್ನೆ ಈಗಿಲ್ಲ. ಆದರೆ ಈಗ ಕೊರೆಯುತ್ತಿರುವುದು ಮನದಲ್ಲಿ ಉಳಿದು ಹೋದ ಅಲ್ಲಿನ ಸವಿ ನೆನಪುಗಳು.

ಅಲ್ಲಿ ಸುಮಾರು ಮೂರು ವರುಷಗಳ ಜೀವನ. ನೆನಪುಗಳನ್ನು ಸವಿಯಾಗಿಸಿದ ಬಂಧುಗಳಂತ್ತಿದ್ದ ಸಹೋದ್ಯೋಗಿ ಮಿತ್ರರು. ಜೊತೆಜೊತೆಯಾಗಿ ಕಳೆದ ಕ್ಷಣಗಳು, ಆಚರಿಸಿದ ಹಬ್ಬ, ಸಮಾರಂಭ, ಬರ್ತ್‍ಡೆ, ಬೇಬಿ-ಷವರಿನಂತಹ ಪಾರ್ಟಿಗಳು, ವಾರಾಂತ್ಯದ ಕ್ರಿಕೆಟ್, ವಾಲಿಬಾಲ್, ಸೈಕ್ಲಿಂಗ್ ಅಲ್ಲದೆ ಸಮ್ಮರ್‌ನಲ್ಲಿ ಆಡುತ್ತಿದ್ದ ಟೆನ್ನಿಸ್, ಸಾಫ್ಟ್‍ಬಾಲ್‌ನಂತಹ ಲೀಗ್ ಮ್ಯಾಚುಗಳು, ಆಗಾಗ್ಗೆ ನಡೆಯುತ್ತಿದ್ದ ಪೊಕರ್ ನೈಟ್ಸ್, ನಾಟಕ, ಶಾರ್ಟ್‍ಫಿಲಂ‍ನಂತಹ ಚಟುವಟಿಕೆಗಳು, ಪಾರ್ಕಿನಲ್ಲಿ ನಡೆಸಿದ ದೋಸ ಕ್ಯಾಂಪ್, ಗ್ರಿಲ್ಲ್‍ನಂತಹ ಗೆಟ್ಟುಗೆದರ್‍ಸ್‍ಗಳೆಲ್ಲವೂ ಅಂದಿನ ವಾಸ್ತವ. ಇಂದಿನ ವರ್ತಮಾನದಲ್ಲಿ ಕೇವಲ ನೆನಪುಗಳಾಗಿ ಉಳಿದು ಭವಿಷ್ಯತ್ತಿಗಾಗಿ ಮನದ ಡೈರಿಯ ಪುಟವನ್ನು ಸೇರಿದೆ.

ಕೆಲವೊಂದು ನೆನಪುಗಳಿವೆ. ಬದುಕು ಬದಲಾದ ಕ್ಷಣದಲ್ಲಿ ಹೊಸತು ಹಳೆದರ ವ್ಯತ್ಯಾಸ ಹೆಚ್ಚಿಸಿ ವಾಸ್ತವದ ಬದುಕನ್ನೇ ಕಹಿಯಾಗಿಸುವಂತಹ ನೆನಪುಗಳವು. ಇಲ್ಲಿ ಎ.ಟಿ.ಎಮ್‍ನ ಮುಂದೆ ಉದ್ದುದ್ದ ಕ್ಯೂ ನಿಲ್ಲುವಾಗ ಅವನಿಗೆ ಅಲ್ಲಿನ ಡ್ರೈವ್-ಥ್ರೂ ಎ.ಟಿ.ಎಮ್‍ನ ನೆನಪಾಗುತ್ತದೆ. ಬ್ಯಾಂಕಿಗೆ ಹೋದಾಗ ಅಲ್ಲಿನ ಜನ ಜಂಗುಳಿ ಕಂಡು ಬೆರಗಾಗಿ ಕೊನೆಗೆ ಯಾರ್‍ಓ ಹೇಳಿದಂತೆ ಟೋಕನೊಂದನ್ನು ತೆಗೆದುಕೊಂದು ತನ್ನ ಸರದಿಗಾಗಿ ಕಾಯುವಾಗ... ಅಲ್ಲಿ ಚೇಸ್ ಬ್ಯಾಂಕಿನ ಬಾಗಿಲು ತೆರೆದು ಒಳ ನಡೆಯುತ್ತಿದ್ದಂತೆ "ಹಾ...ಯಿ" ಎಂದು ಕರೆದು "ಹವ್ ಕೇನ್ ಐ ಹೆಲ್ಪ್ ಯು ಟುಡೈ" ಎಂದು ಕೇಳುವ ನಗುಮೊಗದ ಆ ಲಿಸಾಳ ನೆನಪಾಗಿ ಮನಸ್ಸು ಮುದುಡುತ್ತದೆ.. ಲೈಸೆನ್ಸ್, ಫೋನ್ ಕನೆಕ್ಷನ್ ಇತ್ಯಾದಿಗಳಿಗೆ ಇಲ್ಲಿನ ಕಚೇರಿಗಳಲ್ಲಿ ತಮ್ಮ ಕೆಲಸವಾಗಲು ಗುಡ್ಡ ಅಗೆದು ಇಲಿ ಹಿಡಿಯುವ ಶ್ರಮ ಪಟ್ಟಾಗ... ಅಲ್ಲಿ ಮನೆಯಲ್ಲೇ ಕೂತು ಫೋನಿನಲ್ಲೊ ಅಥವಾ ಇಂಟೆರ್‌ನೆಟ್ಟಿನಲ್ಲೇ ಮುಗಿದುಹೋಗುವ ಕಸ್ಟಮರ್ ಓರಿಯೆಂಟೆಡ್ ಸರ್ವಿಸಿನ ನೆನಪು ಹಾಯುತ್ತದೆ. ಅವ್ಯವಸ್ಥಿತ ಟ್ರಾಫಿಕ್, ಅದನ್ನು ನೋಡಿಯೂ ನೋಡದಂತೆ ಇನ್ನೇಲ್ಲೋ ನೋಡುತ್ತಾ ಪೀ, ಪೀ ಎಂದು ಊದುವ ನಿಸ್ಸಹಾಯಕ ಪೋಲಿಸ್ ಮಾಮನನ್ನು ಕಂಡಾಗ ಅಲ್ಲಿನ ಟ್ರಾಫಿಕ್ ಸೆನ್ಸ್, ಮಾಮಗಳಿಗಿರುವ ಕರ್ತವ್ಯ ಪ್ರಜ್ನೆ, ಅಧಿಕಾರ, ಚುರುಕುತನದ ಚಿತ್ರಣ, ಬೇಡ ಬೇಡವೆಂದರೂ ಕಣ್ಣ ಮುಂದೆ ತೇಲಿ ಬಂದು ಅಲ್ಲಿನ ನೆನಪುಗಳನ್ನು ಮತ್ತಷ್ಟು ಹಸಿಯಾಗಿಸುತ್ತದೆ.

ನಿನ್ನೆಗಳು ಮಸುಕಾಗದಿದ್ದರೆ ನಾಳೆಗಳಿಗೆ ಪ್ರತಿಭೆಯಿಲ್ಲ. ಅಲ್ಲಿನ ಬದುಕು ಅಲ್ಲಿಗೆ...ಇಲ್ಲಿನ ಬದುಕು ಇಲ್ಲಿಗೆ. ಇಲ್ಲಿ ಅಪ್ಪ, ಅಮ್ಮ, ಅಕ್ಕಂದಿರ ಆರೈಕೆಯಿದೆ. ಆಗೊಮ್ಮೆ ಈಗೊಮ್ಮೆ ಕುಣಿದು ಕುಪ್ಪಣಿಸಲು ಮಲೆನಾಡಿನ ಜಡಿಮಳೆಯಿದೆ. ಮಳೆಯಲ್ಲಿ ನೆನೆದಾಗ ಆಹ್ಲಾದಿಸಲು ಕಾಕನ ಗೂಡಂಗಡಿಯಲ್ಲಿ ಸಿಗುವ ಬಿಸಿ ಬಿಸಿ ಚಹವಿದೆ. ಸಾಲು ಸಾಲಾಗಿ ಬರುವ ಹಬ್ಬ ಹರಿದಿನಗಳ ಸಡಗರ ಸಂಭ್ರಮವಿದೆ. ಮೈ ಜಡ್ದು ಹಿಡಿದು ಕೂತಾಗ ಬಾಯಾಡಿಸಲು ರಸ್ತೆ ಬದಿಯ ಚುರುಮುರಿ, ಪಾನಿಪೂರಿಯ ಗಾಡಿಗಳಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವನಿಗೆ ನಿನ್ನೆಯ ನೆನಪುಗಳಲ್ಲೆ ಕಳೆದುಹೋಗದೆ ನಾಳೆಯ ಕನಸುಗಳಲ್ಲಿ ಖುಷಿಪಡುವ ಮನಸ್ಸಿದೆ.
ಈಗೆಲ್ಲಾ ಮನೆಯ ನೆನಪಾದಾಗ ರಾತ್ರಿಯ ಸ್ಲೀಪರ್ ಬಸ್ಸ್ ಹತ್ತಿ ಮೊಬೈಲಿನ ಇಯರ್ ಫೋನ್ ಕಿವಿಗೆ ಸಿಕ್ಕಿಸಿ ಮಲಗುತ್ತಾನೆ. ಅದರಲ್ಲಿ ಅವನಿಷ್ಟದ ಹಾಡು.... ಮುಸ್ಸಂಜೆ ಮಾತಿನ ಪ್ರದೀಪಣ್ಣನ ಆ ಸಕ್ಕತ್ ಹಾಟ್ ಹಾಡು...

ಎನಾಗಲಿ... ಮುಂದೆ ಸಾ...ಗು ನೀ,
ಬಯಸಿದ್ದೆಲ್ಲಾ ಸಿಗದು ಬಾ...ಳಲಿ,
ಬಯಸಿದ್ದೆಲ್ಲಾ..... ಸಿಗದು ಬಾಳಲಿ,
ಓ..ಓ..ಓ
ನನ್ನಾಣೆ ನನ್ನ ಮಾತು ಸುಳ್ಳಲ್ಲ...

Wednesday, October 29, 2008

ಕೋತಿಗಳು ಸಾರ್ ಕೋತಿಗಳು...

ನಾನು ಏನೆಂದು ಹೇಳಲಿ...?
ಅಲ್ಲೊಂದಷ್ಟು ಜನ ಷೇರುಪೇಟೆಯಲ್ಲಿ ದಿವಾಳಿ
ಇಲ್ಲೊಂದಿಷ್ಟು ಜನ ಬ್ಯಾಂಕಿನಲ್ಲಿ ದಿವಾಳಿ
ನಡೆಯುತ್ತಿರಲು ಎಲ್ಲೆಲ್ಲೂ ದಿವಾಳಿಯ ಹಾವಳಿ
ಭಯವಾಗುತ್ತಿದೆ ಎನ್ನಲು ’ಹ್ಯಾಪಿ ದಿವಾಲಿ’

So..ನನ್ನ ಬ್ಲಾಗ್ ಓದುಗರಿಗೆಲ್ಲಾ ’ಹ್ಯಾಪಿ ದೀಪಾವಳಿ’


ಈ ಸಲದ ದೀಪಾವಳಿಗೆ ಎಲ್ಲೆಲ್ಲೂ ಡಮ್ ಡಮಾರ್ ಡಮ್ !!! ಕೆಲವೆಡೆ ಪಟಾಕಿದ್ದು ಇನ್ನು ಕೆಲವೆಡೆ ಆರ್ಥಿಕ ಕುಸಿತದ್ದು. ದೀಪಾವಳಿಗೂ ಮೊದಲೇ ಷೇರು ಮಾರ್ಕೆಟ್ ಮಾಡಿಬಿಟ್ಟಿವೆ ಜನರನ್ನು ದಿವಾಳಿ. ರಾಕೆಟಿನಂತೆ ಮೇಲೆರಿದ್ದ ಮಾರ್ಕೆಟ್ ಈಗ ಟುಸ್ ಆಗಿ ಯಾರ ಲೆಕ್ಕಾಚಾರಕ್ಕೂ ಸಿಗದಷ್ಟು ನೆಲ ಹಿಡಿದು ಕೂತಿದೆ. ಅದ್ಯಾವಾಗ ಏಳುತ್ತೊ ಅದ್ಯಾವಾಗ ಬೀಳುತ್ತೊ ನನಗಂತೂ ಅರ್ಥ ಆಗ್ತಿಲ್ಲ.. ನಿಮಗೂ ಆಗಿಲ್ವ..? ಹಾಗಾದ್ರೆ ಇಲ್ಲೊಂದು ಹಳೆಯ ಕಥೆ (ಇಂಗ್ಲೀಷ್ ಕಥೆಯೊಂದರ ಅನುವಾದ) ಇದೆ.. ಓದಿ.

ಅದೊಂದು ಹಳ್ಳಿ. ಒಂದು ದಿನ ಒಬ್ಬ ವ್ಯಾಪಾರಿ ತನ್ನ ಸಹಾಯಕನೊಂದಿಗೆ ಅಲ್ಲಿಗೆ ಬರುತ್ತಾನೆ. ಅಲ್ಲಿನ ಜನರನ್ನೆಲ್ಲಾ ಕರೆದು, ತಾನು ಕೋತಿಗಳನ್ನು ಒಂದಕ್ಕೆ 10 ರುಪಾಯಿಯಂತೆ ಖರೀದಿಸುವುದಾಗಿ ಹೇಳುತ್ತಾನೆ. ಹಳ್ಳಿಗರಿಗೆ ಸಂತಸ. ಹಳ್ಳಿಯಲ್ಲಿ ಸಾಕಷ್ಟು ಕೋತಿಗಳಿವೆ. ಹಳ್ಳಿಗರೆಲ್ಲಾ ಇರೋ ಕೆಲಸ ಬಿಟ್ಟು ಕೋತಿ ಹಿಡಿದು ತಂದರು. ವ್ಯಾಪಾರಿ ಸಾವಿರಾರು ಕೋತಿಗಳನ್ನ ಒಂದಕ್ಕೆ 10 ರುಪಾಯಿಯಂತೆ ಕೊಂಡುಕೊಂಡ. ಕೋತಿಗಳು ಕಮ್ಮಿಯಾಗಿ ಸಿಗುವುದು ಕಷ್ಟವಾದಾಗ ಜನರ ಕೋತಿ ಹಿಡಿಯುವ ಪ್ರಯತ್ನವೂ ಕಮ್ಮಿಯಾಯಿತು. ಈಗ ಆ ವ್ಯಾಪಾರಿ ಒಂದೊಂದು ಕೋತಿಗೆ 15 ರುಪಾಯಿ ಕೊಡುವುದಾಗಿ ಪ್ರಕಟಿಸುತ್ತಾನೆ. ಹಳ್ಳಿಗರು ತಮ್ಮ ಪ್ರಯತ್ನವನ್ನು ಮುಂದುವರೆಸಿ ಅಲ್ಲಿ ಇಲ್ಲಿ ಕೋತಿ ಹಿಡಿದು ತಂದು ಮಾರಿದರು. ಕ್ರಮೇಣ ಕೋತಿಗಳ ಅಭಾವದಿಂದ ಸಿಗದಾದಾಗ ಜನ ತಮ್ಮ ಪ್ರಯತ್ನ ಬಿಟ್ಟು ಹೊಲದ ಕೆಲಸದಲ್ಲಿ ಮಗ್ನರಾದರು. ಈಗ ವ್ಯಾಪಾರಿ ಒಂದಕ್ಕೆ 25 ರುಪಾಯಿ ಕೊಡುವುದಾಗಿ ಪ್ರಕಟಿಸುತ್ತಾನೆ. ಹಳ್ಳಿಗರು ಕಾಡು ಮೇಡು ಅಲೆದರೂ ಕೋತಿ ಹಿಡಿಯೊದು ಬಿಡಿ... ಕಣ್ಣಿಗೆ ಕಾಣಿಸುವುದೇ ಅಪರೂಪವಾಯಿತು. ಹಿಡಿಯಲು ಅಲ್ಲಿ ಅದ್ಯಾವ ಕೋತಿನೂ ಉಳಿದಿಲ್ಲ.

ಈಗ ಆ ವ್ಯಾಪಾರಿ ಕೋತಿಯೊಂದಕ್ಕೆ 50 ರುಪಾಯಿ ಪ್ರಕಟಿಸುತ್ತಾನೆ. ಆದರೆ ಕೆಲಸ ನಿಮ್ಮಿತ್ತ ತಾನು ಪಟ್ಟಣಕ್ಕೆ ಹೋಗಬೇಕಾಗಿದೆಯೆಂದೂ, ತನ್ನ ಅನುಪಸ್ಥಿತಿಯಲ್ಲಿ ತನ್ನ ಸಹಾಯಕನು ಜನರಿಂದ ಕೋತಿಗಳನ್ನು ಕೊಳ್ಳುವುದಾಗಿಯೂ ಹೇಳಿ ಹೋಗುತ್ತಾನೆ. ಹಳ್ಳಿಗರಿಗೆ ಒಂದೂ ಕೋತಿ ಸಿಗುತ್ತಿಲ್ಲ. ಈಗ ಆ ಸಹಾಯಕನು ಬೋನಿನಲ್ಲಿರೋ ಆ ಕೋತಿಗಳನ್ನು ಹಳ್ಳಿಗರಿಗೆ ತೋರಿಸುತ್ತಾ ಹೇಳುತ್ತಾನೆ, "ವ್ಯಾಪಾರಿ ಕೊಂಡ ಈ ಕೋತಿಗಳನ್ನು ನಾನು ನಿಮಗೆ 35 ರುಪಾಯಿಗೊಂದರಂತೆ ಮಾರುತ್ತೇನೆ. ವ್ಯಾಪಾರಿ ಮರಳಿದ ಬಳಿಕ ನೀವು ಅವನಿಗೆ 50 ರುಪಾಯಿಗೊಂದರಂತೆ ಮಾರಬಹುದು". ಹಳ್ಳಿಗರು ಹುಚ್ಚೆದ್ದು ಇದ್ದ ಉಳಿತಾಯವನ್ನೆಲ್ಲಾ ಖರ್ಚು ಮಾಡಿ, ಇನ್ನು ಕೆಲವರು ಸಾಲ ಸೋಲ ಮಾಡಿ ಕೋತಿ ಕೊಳ್ಳುತ್ತಾರೆ. ಮರುದಿನದಿಂದ ಸಹಾಯಕನ ಪತ್ತೆಯಿಲ್ಲ.. ವ್ಯಾಪಾರಿಯಂತೂ ಮೊದಲೇ ಇಲ್ಲ.. ಈಗ ಹಳ್ಳಿಯಲ್ಲಿ ಎಲ್ಲೆಲ್ಲೂ ಕೋತಿಗಳೇ ತುಂಬಿವೆ.

ಷೇರು ಮಾರ್ಕೆಟ್ ಕೂಡ ಹೀಗೆ. ದುಡ್ಡು ಮಾಡ್ಕೊಳ್ಳೊವ್ರು ಸಮಯಕ್ಕೆ ಸರಿಯಾಗಿ ಮಾಡ್ಕೊಂಡಿದ್ದಾರೆ..
ಆದರೆ ಕೈ ಸುಟ್ಟು ಕೊಂಡಿರುವವರೆಲ್ಲ 10ರ ಬೆಲೆಯ ಕೋತಿಯನ್ನು 35 ರುಪಾಯಿಗೆ ಕೊಂಡ್ಕೊಂಡು 50ಕ್ಕೆ ಮಾರುವ ಕನಸು ಕಂಡವರು. ಪಾಪ...ಈಗ ತಮಗಾದ ನಷ್ಟವನ್ನು ಸರಿತೂಗಿಸಲು ಷೇರುಗಳ ಬೆಲೆ ಏರುವುದನ್ನೇ ಎದುರು ನೋಡುತ್ತಾ ಇನ್ನೊಂದೆರಡು ವರ್ಷ ಕಾಯಬೇಕು, ಹಳ್ಳಿಗರು ವ್ಯಾಪಾರಿಯ ಬರವನ್ನು ಕಾದಂತೆ.

ಆದರೆ... ವ್ಯಾಪಾರಿ ಮರಳುತ್ತಾನಾ..? ಅವನು ಬರೊವರೆಗೂ ಕೋತಿಗಳನ್ನು ಸಾಕುತ್ತಾ ಕೂತಿರಲು ಸಾಧ್ಯನಾ..? ಹ್ಹಾ...... ಆ ವ್ಯಾಪಾರಿ ಬಂದರೆ ನನಗೂ ತಿಳಿಸಿ... ನನ್ನ ಬಳಿಯಲ್ಲೂ ಹಲವು ಕೋತಿಗಳಿವೆ.

ಹ್ಯಾಪೀ ದಿವಾಳಿ(ಲಿ)

Saturday, September 27, 2008

ಕಥೆಯೊಂದು ವ್ಯಥೆಯಾಗಿ...

ಅಂದು ಭಾನುವಾರ ಮಧ್ಯಾಹ್ನ. ಆರ್ಕುಟಿನಲ್ಲಿ ಅವರಿವರ ಸ್ಕ್ರಾಪ್ ನೋಡುತ್ತಾ ನನ್ನ ಟೈಮ್ ಸ್ಕ್ರಾಪು ಮಾಡುತ್ತಿದ್ದೆ. ಹೊರಗಡೆ ಎನೋ ಗಡು-ಗುಡು ಸದ್ದಾಯಿತು ಅಪಾರ್ಟ್‍ಮೆಂಟೇ ಅಲ್ಲಾಡುವಷ್ಟು. ಹೇಳದೆ ಕೇಳದೆ ಟೊರ್ನಾಡೊ ಎನಾದ್ರೂ ಬಂತೇನೋ ಅಂದು ಕೊಳ್ಳುವಷ್ಟರಲ್ಲಿ ಆ ಸದ್ದು ಬಂದು ನನ್ನ ಮನೆ ಬಾಗಿಲ ಮುಂದೆ ನಿಂತಂತೆ. ಗಾಬರಿಯಿಂದ ಹೋಗಿ ಬಾಗಿಲು ತೆರೆದೆ.

ಎಳೆಂಟು ಜನರ ಗುಂಪು. ನಮ್ಮೂರಿನ ಇಂಡಿಯನ್ ಕಮ್ಯೂನಿಟಿಯ ಮಹಿಳಾಮಣಿಗಳೆಲ್ಲಾ ಕೈ ಹಿಂದಕ್ಕೆ ಇಟ್ಟುಕೊಂಡು ನಿಂತಿದ್ದಾರೆ. ಕೈನಲ್ಲೇನೋ ಇದೆ. ನನಗೆ ಆಶ್ಚರ್ಯ.. ಇವರೆಲ್ಲಾ ಯಾಕೆ ಇಲ್ಲಿ...? ಅಷ್ಟರಲ್ಲಿ ಗುಂಪಿನ ಕೊನೆಯಲ್ಲಿಬ್ಬರು ಬ್ಲಾಗು...ಮೈಕ್ರೊ ಕತೆ...ಅಂತ ಮಾತಾಡುತ್ತಿದ್ದುದು ಕೇಳಿಸಿತು.. ಓಹ್.. ಈಗ ಅರ್ಥವಾಯಿತು..ಇತ್ತೀಚೆಗೆ ಬ್ಲಾಗಿನಲ್ಲಿ ಕೆಲವು ಕತೆ, ಕವಿತೆಗಳನ್ನು ಬರೆದು ಸ್ವಲ್ಪ ಫೇಮಸ್(?) ಆಗಿದ್ನಲ್ಲ.... ಬಹುಶಃ ಇವರೆಲ್ಲಾ ನನ್ನ ಅಭಿಮಾನಿಗಳು. ಅಭಿನಂದಿಸಲು ಹಾರ ತುರಾಯಿ (ಹಿಂದಕ್ಕೆ ಇಟ್ಕೊಂಡಿರೊ ಕೈನಲ್ಲಿ) ತಂದಿರಬಹುದೆಂದು ಊಹಿಸಿ...ಬನ್ನಿ ಬನ್ನಿ ಒಳಗೆ ಎಂದು ಕರೆದೆ. ಬಂದರು ಒಳಗೆ. ಆದರೆ ಕೂರಲಿಲ್ಲ. ನನ್ನ ಸುತ್ತುವರೆದು ನಿಂತು.."ಎನೋ.. ದೊಡ್ಡ ರೈಟರಾ ನೀನು..? ಕಥೆ ಬರಿತಿಯಾ...? ಮಾನ ಹರಾಜು ಮಾಡಲು ನಮ್ಮ ಕಥೆನೆ ಬರಿಬೇಕಾ..?" ಅಂದಾಗ ನನ್ನ ಹಣೆ ಸಣ್ಣಗೆ ಬೆವರ ತೊಡಗಿತು. "ಮಾನ ಹರಾಜಾ..? ನಾನ...." ಅಂತ ತೊದಲುವಷ್ಟರಲ್ಲಿ..ಇನ್ನೊಬ್ಬರು...ಮೊದಲು ನಿನ್ನ ಆ "ಮಳೆ ನಿಂತು ಹೋದ ಮೇಲೆ..." ಕಥೆಯನ್ನು ಬ್ಲಾಗಿಂದ ತೆಗೆದು ಹಾಕಿ ಕ್ಷಮೆ ಕೇಳು ಅಂದಾಗ ನನಗರ್ಥವಾಗಿತ್ತು ಇವರೆಲ್ಲಾ ಆ ಕಥೆ ಓದಿ ಕುಂಬಳಕಾಯಿ ಕಳ್ಳನ ಹಾಗೆ ಹೆಗಲು ಮುಟ್ಕೊಂಡಿರೋವ್ರು ಅಂತ. ನಾನು ಸ್ವಲ್ಪ ಧೈರ್ಯ ತಂದುಕೊಂಡು... "ಅದು ನಿಮ್ಮ ಕಥೆ ಅಲ್ಲ. ಬಾಗಿನಲ್ಲಿ ಎನನ್ನೂ ಬರೆಯೊ ಹಕ್ಕಿದೆ...." ಎಂದೆನೋ ಹೇಳುತ್ತಿದ್ದೆ. ಅಷ್ಟರಲ್ಲಿ ಹಿಂದಿನಿಂದ ಯಾರೋ ಜುಟ್ಟು ಹಿಡಿದು.. ತಲೆ ಮೇಲೆ ಸೌಟಲ್ಲಿ ಟಣ್ ಅಂತ ಹೊಡೆದದ್ದಷ್ಟೇ ನೆನಪು. ಆಮೇಲೆ ಕಣ್ಣು ಕತ್ತಲೆ ಕವಿದಂತಾಗಿ ಸುತ್ತಲೂ ಕತ್ತಲೆ.

ಎದ್ದು ಕುಳಿತೆ. ಸುತ್ತಲೂ ಕತ್ತಲೆ... ತಲೆ ಮುಟ್ಟಿ ನೋಡಿದೆ. ಟಣ್ ಆದ ಜಾಗದಲ್ಲಿ ಎನೂ ಆಗಿರಲಿಲ್ಲ. ಸದ್ಯ...ಇದು ಬರೀ ಕನಸೆಂದುಕೊಂಡು ಎದ್ದು ಟೈಮ್ ನೋಡಿದೆ. ಬೆಳಗಿನ ಜಾವ ಐದೂವರೆ.!! ಅಸಲಿ ಸಮಸ್ಯೆ ಸುರುವಾದದ್ದೇ ಇಲ್ಲಿಂದ.

ಈಗೀಗ, "ಬೆಳಗಿನ ಜಾವ ಬಿದ್ದ ಕನಸು ನಿಜ ಆಗುತ್ತಾ...?" ಅನ್ನೋ ಯೋಚನೆ ಬಂದಾಗಲೆಲ್ಲಾ... ’ಟಣ್’ ಆದ ಜಾಗದಲ್ಲಿ ಸಣ್ಣದೊಂದು ನೋವು ಕಾಣಿಸಿಕೊಳ್ಳುತ್ತಿದೆ.


=======================================

ದಿನಾಂಕ 30 ಸೆಪ್ಟಂಬರ್ 2008 ರಂದು ಸಂಜೆ 5:38ರ ಗೋಧೋಳಿಯ ಶುಭ ಮುಹೂರ್ತದಲ್ಲಿ ಮೇಲಿನ ಕನಸು ನನಸಾಗಿದೆ ಎಂದು ತಿಳಿಸಲು ವಿಷಾದಿಸುತ್ತೆನೆ.

Sunday, September 7, 2008

ನಕ್ಕು ಬಿಡಕ್ಕ...

’ಅಕ್ಕ’ದಲ್ಲಿ ಸಿಕ್ಕ ದೊಡ್ಡಕ್ಕ
--------------
ಹೋಗಿದ್ದೆ ನಾನಂದು ಶಿಕಾಗೊಗೆ ನೋಡಲು 'ಅಕ್ಕ'
ನೋಡಿದ್ದು ಅಲ್ಲಿ ಬರೀ ಚೆಲುವೆಯರನ್ನೇ 'ಅಕ್ಕ-ಪಕ್ಕ'
ಅದರಲ್ಲೊಬ್ಬಳು ಬಂದು ನಕ್ಕು ಕುಳಿತಾಗ ನನ್ನ 'ಪಕ್ಕ'
ಸಾರ್ಥಕವೆನಿಸಿತ್ತು ನಾ ಕೊಟ್ಟಿದ್ದ ಎಂಟ್ರಿ 'ರೊಕ್ಕ'


ಸುರುವಾದಾಗ ನನ್ನ ಮನದಲ್ಲೊಂದು 'ಥೈಯಾ ತಕ'
ಅಂದುಕೊಂಡೆ, ನಾ ಕೇಳಿಬಿಡಲೇ ಇವಳ 'ಜಾತಕ'
ಅಷ್ಟರಲ್ಲೇ ಓಡಿ ಬಂತು ಅವಳಲ್ಲಿಗೆ ಮಗುವೊಂದು 'ಚಿಕ್ಕ'

ಹೇಳುತ್ತಾ "ಅಮ್ಮಾ..ಮಾಡಿದ್ದೇನೆ ನಾ ಚಡ್ಡಿಯಲ್ಲಿ 'ಕಕ್ಕ'"

ಜಾಗ ಖಾಲಿಮಾಡಿದ್ದೆ ನಾ ಹೇಳುತ್ತಾ "ಬರುತ್ತೆನಕ್ಕಾ"

Monday, August 4, 2008

ಮೈಕ್ರೊ ಕಥೆಗಳು -

1. ಮಳೆ ನಿಂತು ಹೋದ ಮೇಲೆ...

ದಾಂಪತ್ಯದ ಮೊದಲ ದಿನಗಳವು. ಅವನು, ಆಫೀಸಿಗೆ ಹೊರಡಲು ರೆಡಿಯಾಗುತ್ತಿದ್ದಾನಷ್ಟೆ. ಅವಳು, ಬೇಗನೆ ಎದ್ದು ತಯಾರಿಸಿದ ಬಿಸಿಬಿಸಿ ಉಪಾಹಾರದೊಂದಿಗೆ ಡೈನಿಂಗ್ ಟೇಬಲಿನಲ್ಲಿ ಅವನಿಗಾಗಿ ಕಾಯುತ್ತಿದ್ದಾಳೆ.
3-4 ತಿಂಗಳುಗಳ ಬಳಿಕ, ಅವನು ಆಗಲೇ ರೆಡಿಯಾಗಿದ್ದು ತಿಂಡಿಗಾಗಿ ಕಾಯುತ್ತಿದ್ದಾನೆ. ಆದರೆ ಅವಳಿನ್ನೂ ಕಿಚನಿನಲ್ಲಿ ಬ್ಯುಸಿಯಾಗಿದ್ದಾಳೆ. ಕೆಲವೊಮ್ಮೆ ಅವಳು ತೀರಾ ಬ್ಯುಸಿ(ಬಿಸಿ)ಯಾದಾಗ ಅವನು ಬ್ರೆಡ್‍ಜ್ಯಾಮ್ ಇಲ್ಲವೆ ಕಾರ್ನ್‍ಫ್ಲೇಕ್ಸ್‍ಗೇ ಶರಣಾಗಿದ್ದಾನೆ.
6-7 ತಿಂಗಳ ಬಳಿಕ, ಅವನು ತಾನೇ ರೆಡಿ ಮಾಡಿಕೊಂಡ ತಣ್ಣಗಿನ ಸೀರಿಯಲನ್ನು ತಿನ್ನುವಾಗ, ಅವಳು ಮಲಗಿದಲ್ಲೇ ಮುಸುಕು ಸರಿಸಿ ಹೇಳುತ್ತಾಳೆ "ನೀವು ಮಾಡುವ ತಟ್ಟೆ ಚಮಚದ ಸದ್ದಿಗೆ ನನಗೆ ಎಚ್ಚರವಾಗಿ ನಿದ್ರಾ ಭಂಗವಾಗುತ್ತಿದೆ...ಸದ್ದು ಮಾಡದೆ ತಿಂದು ಹೊರಡಿ."

------------------------------------------------------------

2. ತನ್ನದಲ್ಲದ ಹಾದಿಯಲ್ಲಿ...

ಕೈ ತುಂಬಾ ಸಂಬಳದ ಹೊಸ ಕೆಲಸಕ್ಕೆ ಸೇರಿದ ಅವನ ಉತ್ಸಾಹ ತುಂಬಾ ದಿನ ಉಳಿಯಲಿಲ್ಲ. ಕೈ ತುಂಬಾ ಸಂಬಳದ ಜೊತೆಗೆ ಬಂತು ಮೈ ತುಂಬಾ ಕೆಲಸ, ಟಾರ್ಗೆಟ್, ಡೆಡ್‍ಲೈನು, ಡೆಲಿವೆರಿ, ಮೀಟಿಂಗು, ಪರ್ಫಾರ್ಮೇನ್ಸ್ ರೇಟಿಂಗು...ಊಫ್....

ಅವನೀಗ ಆಸ್ಪತ್ರೆಯ ಬೆಡ್ಡಿನಲ್ಲಿದಾನೆ.
ಅವನಿಗೆ ಕೆಲಸದ ಒತ್ತಡದಿಂದ ರಕ್ತದ ಒತ್ತಡ ಜಾಸ್ತಿಯಾಗಿ ಸ್ಟ್ರೋಕ್ ಹೊಡೆದಿದೆ. ದೇಹದ ಏಡಭಾಗದಲ್ಲಿ ಸ್ವಾದೀನವಿಲ್ಲ. ಈಗ ಎಡಗೈಯ ರಿಪೇರಿಗೆ ಬಲಗೈನಲ್ಲಿ ಪಡೆದ ’ಕೈ ತುಂಬಾ’ ಸಂಬಳ ಸೋರಿಹೋಗಿದೆ.

ಅವನ ಮನದಾಳದಲ್ಲಿ ನೋವು ತುಂಬಿದ ಪ್ರಶ್ನೆಯೊಂದು ಕಾಡುತ್ತಿದೆ....."ಈಸ್ ಇಟ್ ವರ್ಥ್..?"

-------------------------------------------------------------

3. ಬುದ್ದ ಹೇಳಿದ್ದು...

ಬುದ್ದನ ಕುರಿತಾದ ಸಾಕಷ್ಟು ಪುಸ್ತಕಗಳನ್ನು ಓದಿ ತಲೆಕೆಡಿಸಿಕೊಂಡು ನಿದ್ರೆ ಹೋಗಿದ್ದ ಅವನು ಅಂದು ಮದ್ಯರಾತ್ರಿಯಲ್ಲಿ ದಿಡೀರನೆ ಎದ್ದು ಕುಳಿತ...ಬುದ್ದನಂತಾಗಬೇಕೆಂಬ ’ಆಸೆ’ಯಿಂದ.
ಆದರೆ ’ಆಸೆಯೇ ದು‍ಃಖಕ್ಕೆ ಮೂಲ’ ಎಂದು ಪುಸ್ತಕದಲ್ಲಿ ಬುದ್ದ ಹೇಳಿದ್ದು ನೆನಪಾಗಿ, ಹೊದ್ದು ಮಲಗಿದ್ದ ಮರುಕ್ಷಣದಲ್ಲಿ.

(ಇದು ಮಾತ್ರ ಯಾವಾಗಲೋ ಓದಿದ್ದ ಹನಿಗವನವೊಂದರ ರೂಪಾಂತರ)

Sunday, May 11, 2008

ದೂರ ತೀರ ಯಾನ...

ನನ್ನ ಕನಸುಗಳೇ ಹೀಗೆ! ಆದಿ-ಅಂತ್ಯ ಇಲ್ಲದವು.
ದಿಂಬಿಗೆ ತಲೆ ಇಟ್ಟೊಡನೆಯೆ ತಾ ಮುಂದು ನಾ ಮುಂದು ಎಂದು ಪೈಪೋಟಿಯಲ್ಲಿ ಬರುವ ಅವಕ್ಕೊಂದು ತಲೆ ಬುಡ ಅಂತ ಇರುವುದಿಲ್ಲ. ನಿಜ ಜೀವನದಲ್ಲಿ ಊಹೆಗೂ ಸಿಲುಕದ ಕ್ಷಣಗಳನ್ನು ಕನಸಿನಲ್ಲಿ ಕಂಡಿದ್ದೇನೆ. ಈ ಕ್ಷಣದಲ್ಲಿ ನನ್ನ ಮನೆಯ ಸೋಫಾದಲ್ಲಿ ಗೌತಮ ಬುದ್ದನ ಜೊತೆ ಕುಳಿತು ಟಿ.ವಿಯಲ್ಲಿ ಕ್ರಿಕೆಟ್ ನೋಡುತ್ತಿದ್ದರೆ, ಮರುಕ್ಷಣದಲ್ಲಿ ಬಿಪಾಶಳ ಜೊತೆ
ಇನ್ನೇನೋ(?) ಮಾಡುತ್ತಿರುತ್ತೇನೆ..... ಹೋಗಲಿ ಬಿಡಿ.

ಆದರೆ ನಾನು ಹೇಳಲು ಹೊರಟಿರುವ ಇಂದಿನ ಕನಸು ಮಾತ್ರ ಎಂದಿಗಿಂತ ವಿಭಿನ್ನವಾದದ್ದು.

ಅಂದು ನಾನು ಕಾಲೇಜಿನ ಪ್ರಾಣಿವಿಜ್ನಾನ ಪ್ರಯೋಗಾಲಯದಲ್ಲಿದ್ದೆ. ನನ್ನ ಹೊರತಾಗಿ ಬೇರೆ ಯಾರೂ ಅಲ್ಲಿಲ್ಲ. ಸೂಕ್ಷ್ಮದರ್ಶಕವೊಂದರ ಮುಂದೆ ಕುಳಿತು ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದೇನೆ. ಅತೀವ ಎಕಾಗ್ರತೆಯಿಂದ ನೋಡುತ್ತಿದ್ದ ನನಗೆ ಯಾವುದೋ ಜೈವಿಕ ಅಣುಗಳು, ಡಿ.ಎನ್.ಏಗಳು ಕಾಣಿಸುತ್ತಿವೆ. ಆದರೆ ಅವು ಯಾವುದೋ ಒಂದು ಆತಂಕದ ಕ್ಷಣದಲ್ಲಿ ಪ್ರಾಣ ಭೀತಿಯಿಂದ ತತ್ತರಿಸಿ ಚೆಲ್ಲಾಪಿಲ್ಲಿಯಾಗಿ ಓಡಾಡುತ್ತಿರುವಂತೆ ಭಾಸವಾಗುತ್ತಿದೆ. ಯಾವ ಜೀವಿಯ ಅಣುಗಳಿವು..? ಯಾಕೆ ಹೀಗೆ ಆತಂಕ..? ತಿಳಿದುಕೊಳ್ಳುವ ಕುತೂಹಲದಿಂದ ಸೂಕ್ಷ್ಮದರ್ಶಕದ ಲೆನ್ಸನ್ನು ನಿಧಾನವಾಗಿ ಜೂಮೌಟ್ (Zoom Out) ಮಾಡಿದೆ. ಓಹ್...ಆ ಜೀವಾಣುಗಳು ಒಂದು ಬಣ್ಣದ ಚಿಟ್ಟೆಯದ್ದು. ಬಣ್ಣ ಬಣ್ಣದ ಆ ಚಿಟ್ಟೆಯು ಪ್ರಕೃತಿಯ ಕಲಾತ್ಮಕ ಸೃಷ್ಟಿಯ ಸ್ವರೂಪವೆನ್ನಬಹುದು. ಅಂಥಾ ಸುಂದರ ಚಿಟ್ಟೆಯ ಕಣ್ಣುಗಳಲ್ಲಿ ಯಾವುದೋ ಯಾತನೆ, ಜೀವಭಯ. ಯಾಕಿರಬಹುದು..? ಇನ್ನೊಮ್ಮೆ ನಿದಾನವಾಗಿ ಜೂಮೌಟ್ ಮಾಡಿದೆ. ಓಹ್... ಚಿಟ್ಟೆಯು ಒಂದು ಪುಟ್ಟ ಹಕ್ಕಿಯ ಕೊಕ್ಕಿನಲ್ಲಿ ಬಂದಿಯಾಗಿದೆ. ಹಕ್ಕಿಯು ಚಿಟ್ಟೆಯ ಅಂತಿಮ ಹೋರಾಟ ಶಾಂತವಾಗುವುದನ್ನೇ ಕಾಯುತ್ತಿದೆ. ನಿಸರ್ಗದ ಆಹಾರ ಸರಪಳಿಯ ದೃಶ್ಯವನ್ನು ನೋಡಲಾಗದೆ ಮತ್ತೊಮ್ಮೆ ಜೂ..ಮೌ...ಟ್ ಮಾಡಿದೆ.... ಹಕ್ಕಿಯು ಒಂದು ಸಣ್ಣ ಎಲೆಯ ಮೇಲಿದೆ. ಇನ್ನೊಮ್ಮೆ ಜೂ...ಮೌ...ಟ್... ಅದು ಸಂಪಿಗೆ ಗಿಡದ ಎಲೆಯ ಮೇಲೆ ಕೂತಿದೆ. ಜೂ...ಮೌ...ಟ್... ಅದೊಂದು ಉದ್ಯಾನವನ. ಸಂಪಿಗೆ, ಗುಲಾಬಿ, ಜಾಜಿ..ಇನ್ನೂ ನಾನಾ ಬಗೆಯ ಗಿಡಗಳಿವೆ ಆ ಉದ್ಯಾನವನದಲ್ಲಿ. ಇಷ್ಟು ಸುಂದರ ಉದ್ಯಾನವನ ಯಾವುದಿದು..? ಕಬ್ಬನ್ ಪಾರ್ಕಂತೂ ಅಲ್ಲ. ಎಕೆಂದರೆ ಇಲ್ಲೆಲ್ಲೂ ಪ್ರೇಮಿಗಳ "ರಸ"ಮಂಜರಿ ಕಾರ್ಯಕ್ರಮ ಕಾಣುತ್ತಿಲ್ಲ. ಮತ್ತಷ್ಟು ಜೂ..ಮೌ..ಟ್ ಮಾಡಿ ನೋಡಿದಾಗ ಆ ಉದ್ಯಾನವನ ನೀರಿನಿಂದ ಆವೃತ್ತವಾಗಿರುವುದು ಕಾಣಿಸುತ್ತಿದೆ. ಹೌದು ಅದೊಂದು ದ್ವೀಪವಿರಬಹುದು...ಮುಂದಕ್ಕೆ ಜೂಮೌಟ್ ಮಾಡಿದಷ್ಟೂ ಬರೇ ನೀರು ಕಾಣಿಸುತ್ತಿದೆ. ಬಹುಶಃ ಆ ದ್ವೀಪವಿರುವುದು ಸಮುದ್ರದಲ್ಲಿ... ಈಗ ವೇಗವಾಗಿ ಜೂಮೌಟ್ ಮಾಡಿದೆ. ಎಲ್ಲವೂ ವೇಗವಾಗಿ ನನ್ನ ದೃಷ್ಟಿಯಿಂದ ದೂರವಾಗುತ್ತಿದೆ. ಅದರ ವೇಗಕ್ಕೆ ನನ್ನ ದೃಷ್ಟಿಯು ಹೊಂದಿಕೊಳ್ಳಲಾಗದೆ ಯಾಕೊ ತಲೆ ಸುತ್ತುವಂತೆ ಅನ್ನಿಸುತ್ತಿದೆ.. ಭೂಮಿಯ ಗುರುತ್ವಾಕರ್ಷಣ ವಲಯದಿಂದ ಹೊರಬಂದಂತೆ... ಗಾಳಿಯಲ್ಲಿ ತೇಲುವಂತೆ.... ಊಫ್.. ಎನಾಗುತ್ತಿದೆ ನನಗೆ..? ಸ್ವಲ್ಪ ಹೊತ್ತಿನ ಈ ಭ್ರಾಂತಿಯ ಬಳಿಕ ಚೆಂಡಿನಂಥ ವಸ್ತುವೊಂದು ಅಸ್ಪಷ್ಟವಾಗಿ ಕಾಣಿಸುತ್ತಿದ್ದು, ಬರಬರುತ್ತಾ ಅದು ಸ್ಪಷ್ಟವಾಗಿದೆ. ಅರೆ..ಇದು ’ನಾಸ’ದವರು ತೆಗೆದ ಭೂಮಿಯ ಚಿತ್ರದಂತಿದೆಯಲ್ಲಾ..... ಹೌದು, ನಾನು ನೋಡುತ್ತಿರುವುದೇ ಆ ಭೂಮಂಡಲವನ್ನು. ಚಿತ್ರವನ್ನಲ್ಲ. ಸಕಲ ಜೀವಿಗಳಿಗೂ ನೆಲೆಯಾಗಿ ನಿಂತು, ಎಲ್ಲವನ್ನೂ ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ತನ್ನದೆನೂ ಇಲ್ಲವೆಂಬಂತಿರುವ ಆ ಪ್ರಥ್ವಿಯನ್ನು ಧನ್ಯತಾ ಭಾವನೆಯಿಂದ ನೋಡುತ್ತಾ ಕುಳಿತುಬಿಟ್ಟಿದ್ದೆ. ನನ್ನ ಕೈ ಬೆರಳುಗಳು ನನ್ನ ಅರಿವಿಲ್ಲದೆಯೇ ಟೈಮ್ ಅಪ್ ಎಂದು ಜೂಮೌಟ್ ಮಾಡಿದ್ದವು. ಫೊಟೊಗೆ ಪೂಸ್ ಕೊಡಲು ಬಂದಂತೆ ನೆರೆ ಹೊರೆಯ ಮಂಗಳ, ಶುಕ್ರರು ಭೂಮಿಯ ಅಕ್ಕಪಕ್ಕದಲ್ಲಿ ನಿಂತಿದ್ದಾರೆ. ನೋಡುತ್ತಿದ್ದಂತೆ ಗುರು, ರಿಂಗು ಧರಿಸಿದ ಶನಿ....ವಾವ್.. ಇಡೀ ಸೌರಮಂಡಲ ಕಾಣುತ್ತಿದೆ.

ಈ ರೀತಿಯ ಸೌರಮಂಡಲಗಳು ಅದೆಷ್ಟೋ ಇವೆಯಂತೆ. ಲಂಡನಿನ ವಿಜ್ನಾನಿಗಳು ಇತರ ಸೌರಮಂಡಲದಲ್ಲಿ ಭೂಮಿಯಲ್ಲಿರುವಂತೆ ಬುದ್ದಿಜೀವಿಗಳಿರಬಹುದೆಂದು ಊಹಿಸಿ "ಓಹೋಯಿ... ಭೂಮಿಯೆಂಬುದೊಂದಿದೆ, ಇಲ್ಲಿ ನಾವು ಮಾನವರಿದ್ದೇವೆ, ಇತರ ಜೀವಿಗಳಿವೆ, ಪ್ರಕೃತಿಯಿದೆ,....." ಎಂದು ಅನಂತ ವಿಶ್ವಕ್ಕೊಂದು 30 ಸೆಕೆಂಡುಗಳ ಜಾಹಿರಾತನ್ನು ಕಳಿಸಿದ್ದಾರಂತೆ. ಆ ಜಾಹಿರಾತಿನ ತರಂಗಾಂತರ ವೇಗವು 9 ಸೆಕೆಂಡುಗಳಲ್ಲಿ ಚಂದ್ರನನ್ನು ತಲುಪಿ, 9 ನಿಮಿಷದೊಳಗಾಗಿ ಈ ಸೂರ್ಯಮಂಡಲವನ್ನೇ ದಾಟಿ ಹೋಗುವ ಸಾಮರ್ಥ್ಯದ್ದು. 24 ಜ್ಯೋತಿರ್ವಷಗಳಷ್ಟು ದೂರ ಕ್ರಮಿಸಬಲ್ಲ ಆ ಜಾಹಿರಾತು ಇತರ ಯಾವುದೇ ಸೌರಮಂಡಲದಲ್ಲಿ ಇರಬಹುದೆನೋ ಎಂದು ಊಹಿಸಲಾದ ಬುದ್ದಿಜೀವಿಗಳನ್ನು ತಲುಪಿದರೆ, ಅವರು ಅದನ್ನು ಡೌನ್ಲೋಡ್ (download) ಮಾಡಿ ಭೂಮಿಗೆ ಪ್ರತ್ಯುತ್ತರ ಕಳುಹಿಸಬಹುದಂತೆ.

ಯಾವಾಗಲೊ ನ್ಯೂಸ್ ಪೇಪರಿನಲ್ಲಿ ಓದಿದ್ದೊಂದು ಈಗ ಸರಿಯಾದ ಸಮಯದಲ್ಲಿ ನೆನಪಿಗೆ ಬಂದಿದೆ. ಈಗ ಸೂಕ್ಷ್ಮದರ್ಶಕದಲ್ಲಿ ಸೌರಮಂಡಲವನ್ನು ನೊಡುತ್ತಿರುವ ನನಗೆ, ಗ್ಯಾಲಾಕ್ಸಿಯನ್ನು ಹುಡುಕಿ ಆ ಬುದ್ದಿಜೀವಿಗಳಿರುವ ಸೌರಮಂಡಲ ಸಿಕ್ಕಿದರೆ, ಆ ಮೂಲಕ ವಿಜ್ನಾನಿಗಳ ಸಂಶೋದನೆಗೆ ಸಹಕರಿಸಬಹುದೇನೋ... ಅನ್ನುವ ಯೋಚನೆ ಬಂದಿದ್ದೇ ತಡ ಹಿಂದೆ ಮುಂದೆ ನೋಡದೆ ಹುಡುಕಲು ಸುರು ಮಾಡಿದೆ.

ಜೂಮೌಟ್ ಜೂಮ್‍ಇನ್ ಮಾಡುತ್ತಾ ಸುಮಾರು ಗ್ರಹಗಳನ್ನು ನೋಡಿದ್ದಾಯಿತು....ಎಲ್ಲಿಯೂ ಇಂಡಸ್ಟ್ರಿಯ ಅನಿಲ ಬಿಡುಗಡೆಯ ವಾಸನೆಯಗಲಿ, ಶಬ್ದ ಮಾಲಿನ್ಯವಾಗಲಿ, ಕಪ್ಪು ಹೊಗೆಯಾಗಲಿ ಕಾಣಿಸಲ್ಲಿಲ್ಲ. ಆದ್ದರಿಂದ ಇಲ್ಲಿ ಮನುಷ್ಯರಿಲ್ಲ ಎಂದು ಖಾತರಿಪಡಿಸಿಕೊಂಡೇ ಮುಂದಕ್ಕೆ ಹೊಗುತ್ತಿದ್ದೆ. ಹಾರುವ ತಟ್ಟೆಗಳಾದರೂ ಕಾಣಿಸಬಹುದೆನೂ ಅಂತ ಆಸೆಯಿಂದ ನೋಡುತ್ತಿದ್ದೆ. ಅದೂ ಕೂಡ ಕಾಣಿಸದೆ ನಿರಾಸೆಯಾಗಿತ್ತು. ಇನ್ನೇನು ಸೂಕ್ಷ್ಮದರ್ಶಕದ ಕಣ್ಣನ್ನು ಭೂಮಿಯತ್ತ ವಾಪಾಸು ತಿರಿಗಿಸೋಣ ಅಂದುಕೊಳ್ಳುವಷ್ಟರಲ್ಲಿ ದೂರದಲ್ಲೆಲ್ಲೋ ಅತೀ ಸಣ್ಣ ದನಿಯಲ್ಲಿ ಸಂಗೀತದಂತೆ ಕೇಳಿಸುತ್ತಿದೆ. ತಕ್ಷಣವೇ ಸೂಕ್ಷ್ಮದರ್ಶಕವನ್ನು ಹತ್ತಿರದಲ್ಲೇ ಇದ್ದ ಆಯತಾಕಾರದ ಗ್ರಹವೊಂದರ ಮೇಲೆ ಫೊಕಸ್ ಮಾಡಿದೆ... ಅದರ ಹತ್ತಿರ ಹೋದಂತೆಲ್ಲಾ ಸಂಗೀತದ ದ್ವನಿ ಜೋರಾಗುತ್ತಿದೆ... ಹೌದು ಇದೇ ಗ್ರಹ.. ಇಲ್ಲಿ ಜೀವಿಗಳಿರುವುದು ಗ್ಯಾರಂಟಿ ಅನ್ನಿಸುತ್ತಿದೆ...ಆ ಗ್ರಹವನ್ನು ಮೈಯೆಲ್ಲಾ ಕಣ್ಣಾಗಿ ನೋಡುತ್ತಿದ್ದೇನೆ... ಅಲ್ಲಿ ಜೀವಿಗಳೆಲ್ಲೂ ಕಾಣಿಸುತ್ತಿಲ್ಲ...ಆದರೆ ಸಂಗೀತ ಸ್ಪಷ್ಟವಾಗಿ ಕೇಳಿಸುತ್ತಿದೆ....ಅದೂ ಮನೋಮೂರ್ತಿಯವರ ಸಂಗೀತದಂತೆ ಇಂಪಾಗಿದೆ...ಹಾಗದರೆ ಇಲ್ಲಿನ ಜೀವಿಗಳು ಪಾಶ್ಚಿಮಾತ್ಯ ಕಲ್ಚರಿನವರಲ್ಲ... ಇವರು ನಮ್ಮವರೇ ಅಂದುಕೊಳ್ಳುವಷ್ಟರಲ್ಲಿ..."ಮುಂಗಾರು ಮಳೆಯೇ..... ಏನು ನಿನ್ನ ಹನಿಗಳ ಲೀಲೆ.." ಅರೆ... ಇದೇನಿದು... ಇಲ್ಲಿ ಗ್ಯಾಲಾಕ್ಸಿಯ ಯಾವುದೋ ಮೂಲೆಯಲ್ಲಿ ಕನ್ನಡ ಹಾಡು....?? ಮಲಯಾಳಿಗಳು ಬಂದು ಟಿ ಅಂಗಡಿ ಇಟ್ಟಿದ್ದಾರೆಂದರೂ ಒಪ್ಪಬಹುದೆನೊ ಆದರೆ ಈ ಕನ್ನಡಿಗರು ಇಲ್ಲಿ..?? ನನ್ನ ಸಂತೋಷಕ್ಕೆ ಪಾರವೇ ಇಲ್ಲ.. ಕೊನೆಗೊ ಕಂಡುಹಿಡಿದು ಬಿಟ್ಟೆ.. ಯಾ...ಹೂ... ಎಂದು ಅಲ್ಲಿಂದ ಜಿಗಿದವನೇ ನೇರವಾಗಿ ಮಂಚದಿಂದ ನೆಲಕ್ಕೆ ಬಿದ್ದಿದ್ದೆ. ಕಣ್ಣು ಬಿಟ್ಟು ನೋಡಿದಾಗ... ನನ್ನ ಮೊಬೈಲಿನಲ್ಲಿ ಸೆಟ್ ಮಾಡಿದ್ದ ಮುಂಗಾರು ಮಳೆಯ ಅಲಾರಮ್ ಹಾಡುತ್ತಿದೆ.

ಎದ್ದು ಬಾತ್‍ರೂಮಿಗೆ ಹೋಗಿ ಕಮೋಡಿನಲ್ಲಿ ಕೂತಾಗ ಈ ಅರ್ಥವಿಲ್ಲದ ಕನಸಿನ ಬಗ್ಗೆ ಯೋಚಿಸತೊಡಗಿದೆ. ಗ್ಯಾಲಾಕ್ಸಿಯಲ್ಲಿ ಸೌರಮಂಡಲ, ಅದರಲ್ಲಿ ಭೂಮಿ, ಭೂಮಿಯಲ್ಲಿ ಸಮುದ್ರ, ಅದರಲ್ಲೊಂದು ದ್ವೀಪ, ದ್ವೀಪದಲ್ಲೊಂದು ಉದ್ಯಾನವನ, ಉದ್ಯಾನವನದಲ್ಲೊಂದು ಗಿಡ, ಆ ಗಿಡದಲ್ಲೊಂದು ಎಲೆ, ಆ ಎಲೆಯ ಮೇಲೊಂದು ಹಕ್ಕಿ, ಹಕ್ಕಿಯ ಕೊಕ್ಕಿನಲ್ಲಿ ಚಿಟ್ಟೆಯ ಪ್ರಾಣ, ಆ ಚಿಟ್ಟೆಯ ಅಣುಗಳಲ್ಲಿ ಆತಂಕ, ಅದನ್ನು ನಾನು ನೋಡುತ್ತಿರುವುದು ಸೂಕ್ಷ್ಮದರ್ಶಕದಲ್ಲಿ. ಅಬ್ಬಾ.. ಎಲ್ಲಿಂದ ಎಲ್ಲಿಗೆ ನನ್ನ ಯಾನ..?

ತಲೆಬುಡವಿಲ್ಲದ ಈ ಕನಸಿಗೆ ಎನೊಂದೂ ಅರ್ಥವಿಲ್ಲವೆನಿಸಿದರೂ....ಆ ಬಣ್ಣದ ಚಿಟ್ಟೆಯಂತೆ ನಮ್ಮ ಬದುಕು, ಎಷ್ಟೇ ಸುಂದರವಾಗಿದ್ದರೂ ಒಂದು ದಿನ ಅಂತಿಮ ಹೋರಾಟವಿದೆಯೆಂಬುದನ್ನು ಮರೆತು... ನಾನು, ನನ್ನದು, ಬೇಕು, ಇನ್ನೂ ಬೇಕೆನ್ನುತ್ತಾ, ಹೊಡೆದಾಡಿ ಕೊಂಡಿರುವ ನಾವುಗಳು ಪ್ರಕೃತಿಯ ಅನಂತ ವಿಶ್ವದಲ್ಲೊಂದು ಸಣ್ಣ ಅಣು ಸಮಾನರೆಂದು ನನ್ನನ್ನು (ಈಗ ನಿಮ್ಮನ್ನೂ ಕೂಡ) ಎಚ್ಚರಿಸುತ್ತಿರಬಹುದೆ..???

Sunday, April 27, 2008

A Bitter Reality

This is another nice forwarded stuff....written by an Indian SE who was in US.

=======================================================

As the dream of most parents I had acquired a degree in Software Engineer and joined a company based in USA, the land of braves and opportunity. When I arrived in the USA, it was as if a dream had come true. Here at last I was in the place where I want to be. I decided I would be staying in this country for about Five years in which time I would have earned enough money to settle down in India.

My father was a government employee and after his retirement, the only asset he could acquire was a decent one bedroom flat. I wanted to do some thing more than him. I started feeling homesick and lonely as the time passed. I used to call home and speak to my parents every week using cheap international phone cards. Two years passed, two years of Burgers at McDonald's and pizzas and discos and 2 years watching the foreign exchange rate getting happy whenever the Rupee value went down.

Finally I decided to get married. Told my parents that I have only 10 days of holidays and everything must be done within these 10 days. I got my ticket booked in the cheapest flight. Was jubilant and was actually enjoying hopping for gifts for all my friends back home. If I miss anyone then there will be talks. After reaching home I spent home one week going through all the photographs of girls and as the time was getting shorter I was forced to select one candidate. In-laws told me,to my surprise, that I would have to get married in 2-3 days, as I will not get anymore holidays. After the marriage, it was time to return to USA, after giving some money to my parents and telling the neighbors to look after them, we returned to USA.

My wife enjoyed this country for about two months and then she started feeling lonely. The frequency of calling India increased to twice in a week sometimes 3 times a week. Our savings started diminishing. After two more years we started to have kids. Two lovely kids, a boy and a girl, were gifted to us by the almighty. Every time I spoke to my parents, they asked me to come to India so that they can see their grand-children.

Every year I decide to go to India. But part work part monetary conditions prevented it. Years went by and visiting India was a distant dream. Then suddenly one day I got a message that my parents were seriously sick. I tried but I couldn't get any holidays and thus could not go to India. The next message I got was my parents had passed away and as there was no one to do the last rights the society members had done whatever they could. I was depressed. My parents had passed away without seeing their grand children.

After couple more years passed away, much to my children's dislike and my wife's joy we returned to India to settle down. I started to look for a suitable property, but to my dismay my savings were short and the property prices had gone up during all these years. I had to return to the USA.

My wife refused to come back with me and my children refused to stay in India. My 2 children and I returned to USA after promising my wife I would be back for good after two years. Time passed by, my daughter decided to get married to an American and my son was happy living in USA. I decided that had enough and wound-up every thing and returned to India. I had just enough money to buy a decent 02 bedroom flat in a well-developed locality. Now I am 60 years old and the only time I go out of the flat is for the routine visit to the nearby temple. My faithful wife has also left me and ! gone to the holy abode. Sometimes I wondered was it worth all this? My father, even after staying in India, had a house to his name and I too have the same nothing more. I lost my parents and children for just ONE EXTRA BEDROOM .

Looking out from the window I see a lot of children dancing. This damned cable TV has spoiled our new generation and these children are losing their values and culture because of it. I get occasional cards from my children asking I am alright. Well at least they remember me.

Now perhaps after I die it will be the neighbors again who will be performing my last rights, God Bless them.

But the question still remains 'was all this worth it?' I am still searching for an answer................!!!!

Wednesday, March 26, 2008

Yoga..

There are two basic types of Yoga.

Yoga from India...

Yoga from Wisconsin....

Which is the one to follow...? Am confused.....

Tuesday, March 18, 2008

ಬದುಕು ಜಟಕಾ ಬಂಡಿ...

ಬದಲಾವಣೆಯೊಂದೇ ಶಾಶ್ವತ! ಹೌದು, ಎಷ್ಟೊಂದು ಬದಲಾಗಿದ್ದೇನೆ..??

ಸ್ವ-ಇಚ್ಚೆಯಿಂದ ನಿರ್ಧರಿಸಿ ಬದಲಾದದ್ದಲ್ಲ. ವಾಸ್ತವದ ಅನಿವಾರ್ಯತೆಗೆ ಸಿಲುಕಿ ಸುರುವಾದದ್ದು.....ಕೊನೆಯಿಲ್ಲವೇನೋ ಅನ್ನುವಷ್ಟರ ಮಟ್ಟಕ್ಕೆ ಕೊಂಡೊಯ್ದಿದೆ ಈ "ಅದು" ನನ್ನನ್ನು. ಈಗ "ಅದರ" ಸಹವಾಸ ಬಿಟ್ಟಿರಲಾರದಷ್ಟು ಒಗ್ಗಿಕೊಂಡಿದ್ದೇನೆ. "...ಇವತ್ತು ಒಂದು ದಿನವಾದರೂ ’ಅದನ್ನು’ ಮುಟ್ಟುವುದಿಲ್ಲ...." ಅಂತ ಅದೆಷ್ಟೋ ಸಲ ಅಂದುಕೊಂಡು, ಅದಕ್ಕೆ ಅತಿಯಾಗಿ ಅಂಟಿಕೊಂಡಿರುವ ಗೀಳನ್ನು ಬಿಡಿಸೋಕ್ಕೆ ಪ್ರಯತ್ನಿಸಿದ್ದೇನೆ. ಆದರೆ ಎಲ್ಲವೂ ವ್ಯರ್ಥ ಪ್ರಯತ್ನ.

"ಅದರ" ಪರಿಚಯ ನನಗಾಗಿದ್ದು ಸುಮಾರು 10 ವರ್ಷಗಳ ಹಿಂದೆ ಮೈಸೂರಿನಲ್ಲಿ. ಆಗ ನಾನು ಹಾಸ್ಟೇಲಿನಲ್ಲಿದ್ದು ಕಾಲೇಜು ಓದುತ್ತಿದ್ದೆ. ಮೊದಲ ಬಾರಿಗೆ "ಅದರ" ರುಚಿ ನೋಡಿದ ನಾನು ಇದು ನನ್ನಂಥವರಿಗಲ್ಲ ಅಂತ ಸುಮ್ಮನಾಗಿದ್ದೆ. ಆದರೆ ಕೆಲವು ಒಳ್ಳೆಯ ಗೆಳೆಯರು ಅದನ್ನು ಹೇಗೆ ಬಳಸುವುದು ಅಂತ ನನಗೆ ಹಂತ ಹಂತವಾಗಿ ಹೇಳಿಕೊಟ್ಟರು. ಕ್ರಮೇಣ "ಅದನ್ನ" ಬಳಸುವುದನ್ನು ನಾನು ರೂಡಿಸಿಕೊಂಡೆ. ಮೊದಮೊದಲು ಕಷ್ಟವೆನಿಸಿದರೂ ನಿಧಾನವಾಗಿ "ಅದು" ನನಗೆ ಅಭ್ಯಾಸವಾಯಿತು.

ಕಾಲೇಜು ಮುಗೀತು.. ಸರಿ ಇನ್ನೇನು... ನನ್ನ ದಾರಿ ನಾನು ಹಿಡಿಯೋಣ... "ಅದರ" ಸಹವಾಸ ನನಗೆ ಬೇಡ ಅಂದುಕೊಂಡೆ. ಆದರೆ ವಿಧಿಯ ಸಂಕಲ್ಪವೇನೋ ಎಂಬಂತೆ ನನ್ನ ಉದ್ಯೋಗದ ವಾತಾವರಣದಲ್ಲಿ "ಅದರ" ಪ್ರಭಾವ ಹೆಚ್ಚಾಗಿತ್ತು. ನಾನು "ಅದರಿಂದ" ದೂರವಿರಬೇಕೆಂದು ಕೊಂಡಷ್ಟೂ "ಅದು" ನನಗೆ ಹತ್ತಿರವಾಗತೊಡಗಿತು. ಕೊನೆಗೆ "ಅದನ್ನ" ಅನಿವಾರ್ಯವಾಗಿ ಒಪ್ಪಿಕೊಂಡೆ. ಉದ್ಯೋಗಕ್ಕೆಂದು ನಾನು ಹೋದ ಚೆನ್ನೈ, ಹೈದ್ರಾಬಾದ್, ಬೆಂಗಳೂರು ಏಲ್ಲೆಡೆಯೂ ಇತಿ ಮಿತಿಯಲ್ಲಿ "ಅದನ್ನು" ಬಳಸುತಿದ್ದೆ.

ಇತಿ ಮಿತಿಗಳೆಲ್ಲಾ ಕಡಿವಾಣ ತಪ್ಪಿ ಗಾಳಿಪಟವಾದದ್ದು ನಾನು 2 ವರ್ಷಗಳ ಹಿಂದೆ ಅಮೇರಿಕಾಗೆ ಬಂದ ಮೇಲೆ. ನನ್ನ ಆತ್ಮೀಯ ಗೆಳೆಯರೆಲ್ಲರನ್ನೂ ಅಗಲಿ ದೂರದ ಊರಾದ ಅಮೇರಿಕಾಗೆ ಒಂಟಿಯಾಗಿ ಬಂದಾಗ "ಅದುವೇ" ನನ್ನ ಒಡನಾಡಿಯಾಯಿತು. ಮನೆಯ ನೆನಪು ಕಾಡಿ ಬೇಸರವಾದಾಗಲೆಲ್ಲಾ ನಾನು "ಅದರ" ದಾಸನಾಗಿ ಕೂತು ಬಿಡುತ್ತಿದ್ದೆ. ದಿನಕಳೆದಂತೆಲ್ಲಾ "ಅದನ್ನ" ಏಷ್ಟು ಹಚ್ಚಿಕೊಂಡಿದ್ದೆನೆಂದರೇ ನನಗೇ ನಂಬಲಿಕ್ಕಾಗುವುದಿಲ್ಲ. ಅಮೇರಿಕಾಗೆ ಬಂದ ಮೊದಲಲ್ಲೆಲ್ಲಾ ಲಂಚ್ ಬ್ರೆಕ್‍ನ ಒಂದು ಗಂಟೆಗಳ ಅವಧಿಯಲ್ಲಿ ಮನೆಗೆ ಬಂದು 20 ನಿಮಿಷಗಳಲ್ಲಿ ಊಟ ಮುಗಿಸಿ, ಉಳಿದ 20 ನಿಮಿಷ ಸಮಯದಲ್ಲಿ ಅಲಾರಮು ಇಟ್ಟುಕೊಂಡು ಸಣ್ಣದೊಂದು ನ್ಯಾಪ್ ಮುಗಿಸಿ ಏದ್ದು ಆಫೀಸಿಗೆ ಹೋಗುವ ಒಳ್ಳೆಯ ಪರಿಪಾಟ ಇಟ್ಟುಕೊಂಡಿದ್ದೆ. ಈಗ ನ್ಯಾಪ್ ಬಿಡಿ... ಊಟಕ್ಕೂ ಸಮಯವಿಲ್ಲ. ಊಟಕ್ಕೆ ಮನೆಗೆ ಬಂದಾಗಲೂ ನನಗೆ "ಅದು" ಬೇಕು. ಕೆಲವೊಂದು ಸಲ ಊಟ ಮತ್ತು "ಅದು" ಜೊತೆಜೊತೆಗೆ ಆಗುತಿತ್ತು. ಒಟ್ಟಿನಲ್ಲಿ ಆಫೀಸು, ಮನೆ ಏಲ್ಲೆಡೆಯಲ್ಲಿಯೂ "ಅದರದ್ದೇ" ಅಟ್ಟಹಾಸ. ನಿದ್ರೆ, ನಿತ್ಯಕರ್ಮಗಳ ಸಮಯದ ಹೊರತಾಗಿ ಸದಾ ನಾನು "ಅದರ" ವ್ಯಸನಿ.

ಬಿಟ್ಟುಬಿಡಲಾಗದ, ಇಟ್ಟುಕೊಳ್ಳಲೂ ಆಗದ ಈ ನನ್ನ ಹವ್ಯಾಸವನ್ನು ಯಾರೊಡನೆಯಾದರೂ ಹೇಳಿ ಪರಿಹಾರ ಕಂಡುಕೊಳ್ಳೊಣವೆಂದು ಒಂದು ದಿನ ಆಫೀಸಿನಲ್ಲಿ ನನ್ನ ಪಕ್ಕದಲ್ಲಿ ಕೂರುವ ಸಹೋದ್ಯೋಗಿ ಬಳಿ ಹೇಳಿಕೊಂಡೆ. ಪರಿಹಾರ ಸಿಗೋದು ಬಿಡಿ... ನಾನೇ ಅವರಿಗೆ ಸಮಾಧಾನ ಹೇಳಬೇಕಾಗಿ ಬಂತು. ಅವರ ಸಹನೆಯ ಕಟ್ಟೆಯೊಡೆದಿತ್ತು. ಯಾಕೆಂದರೆ ಅವರ ಸಮಸ್ಯೆ ನನಗಿಂತಲೂ ಗಂಭೀರವಾಗಿತ್ತು. ಅವರಿಗೆ ರಾತ್ರಿ ಅರೆನಿದ್ರೆಯಲ್ಲಿ ಏಚ್ಚರವಾದಗಲೂ ಎದ್ದು "ಅದನ್ನು" ಬಳಸುವ ಹವ್ಯಾಸವಿತ್ತು. 'ಕಳ್ಳನಿಗೆ ಕಳ್ಳನೇ ಮಿತ್ರ' ಅನ್ನುವ ಗಾದೆ ಮಾತಿನ ಹಾಗೆ "ಅದರ" ಮಾಯೆಗೆ ನನ್ನಂತೆಯೆ ಸಿಲುಕಿದ ಇತರರು ನನಗೀಗ ಸ್ನೇಹಿತರಾಗುತ್ತಿದ್ದಾರೆ. ಇತ್ತೀಚೆಗೆ "ಅದಕ್ಕೆ" ಮಾರುಹೋದವರ ದೊಡ್ಡದೊಂದು ನೆಟ್‍ವರ್ಕ್ಕೇ ಹುಟ್ಟಿಕೊಂಡಿದೆ. ಒಟ್ಟಿನಲ್ಲಿ "ಅದು" ನನ್ನ ಬದುಕಿನ ಅವಿಭಾಜ್ಯ ಅಂಗವಾಗುತ್ತಿದೆ ಅಂದರೂ ತಪ್ಪಿಲ್ಲ.

ಮೊನ್ನೆ ಡಿಸೆಂಬರ್‌ನಲ್ಲಿ ರಜೆಗೆಂದು ಇಂಡಿಯಾಗೆ ಹೋಗಿದ್ದೆ. ಅಮೇರಿಕಾದಲ್ಲಿ "ಅದಕ್ಕೆ" ವಿಪರೀತವಾಗಿ ಅಂಟಿಕೊಂಡಿದ್ದ ನನಗೆ ಈಗ "ಅದನ್ನು" ಬಿಟ್ಟು ಇರಲಾಗುತ್ತಿರಲಿಲ್ಲ. ಉಡುಪಿಗೆ ಹತ್ತಿರದ ನನ್ನ ಹಳ್ಳಿಯ ಮನೆಯಲ್ಲಿ "ಅದನ್ನು" ಬಳಸಲು ಅವಕಾಶ ಇರಲಿಲ್ಲ. ಏನಾದರೊಂದು ನೆಪದಲ್ಲಿ ಕೆಲವೊಮ್ಮೆ ಉಡುಪಿಗೆ ಬಂದು "ಅದನ್ನು" ಬಳಸುತ್ತಿದ್ದೆ. ಈಗ ಭಾರತದ ಸಿಟಿಗಳಲ್ಲಿ "ಅದನ್ನು" ಬಳಸುವುದಕ್ಕಾಗೇ ವ್ಯವಸ್ಥಿತ ಜಾಗಗಳು ಹುಟ್ಟಿಕೊಂಡಿವೆ. ಕಾಲೇಜು ಹುಡುಗ ಹುಡುಗಿಯರಲ್ಲಿ "ಅದನ್ನು" ಬಳಸುವ ಚಾಳಿ ಬಹಳವಾಗಿ ಕಾಣುತ್ತಿದೆ. ಕಾಲೇಜಿನವರನ್ನು ಬಿಡಿ.. ಈಗೀಗ ಹದಿಹರೆಯದವರೂ ಕೈಯಾಡಿಸುತ್ತಿದ್ದಾರೆ. ಮಕ್ಕಳು ಮೈದಾನದಲ್ಲಿ ಆಟವಾಡುವುದನ್ನೂ ಮರೆತು "ಅದರ" ದಾಸರಾಗಿದ್ದಾರೆ.

"ಅದನ್ನು" ಅತಿಯಾಗಿ ಬಳಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಓದಿ ತಿಳಿದುಕೊಂಡಿದ್ದೇನೆ, ಅನುಭವಿಸಿದ್ದೇನೆ. ಕೆಲವೊಮ್ಮೆ "ಅದರ" ಸತತ ಬಳಕೆಯಿಂದ ನನ್ನ ಕಣ್ಣುಗಳು ಕೆಂಪಾಗುತ್ತವೆ.. ಕಣ್ಣಂಚಿನಲ್ಲಿ ನೀರು ಬರುತ್ತದೆ... ಬೆರಳು, ಮಣಿಗಂಟುಗಳಲ್ಲಿ ಆಗ್ಗಾಗ್ಗೆ ನೋವು ಕಾಣಿಸಿಕೊಳ್ಳುತ್ತದೆ. ಬಿ.ಪಿ.ಯಲ್ಲಿ ಏರುಪೇರಾಗುತ್ತಿದೆ. ಮುಂಚಿನ ಹಾಗೆ ಪೆನ್ನು ಹಿಡಿದು ಹಾಳೆಯಲ್ಲಿ ಬರೆಯಲು ಆಗುತ್ತಿಲ್ಲ...

ಛೆ! ಬದುಕು ಎಷ್ಟೊಂದು ಬದಲಾಗಿದೆ.

"ಅದರ" ಗುಂಗಿನಿಂದ ವಾಪಸು ಬರೋದು ಸಾದ್ಯವಾ..? ಕಷ್ಟ. ಏಕೆಂದರೆ ನಾನೊಬ್ಬನೇ ಅಲ್ಲ.... ಈ ಜಗತ್ತೇ "ಅದನ್ನು" ಅವಲಂಬಿಸಿ ವಾಪಸು ಬರಲು ಆಗದಷ್ಟು ಮುಂದೆ ಹೋಗಿದೆ.