Thank you for visiting...

Wednesday, October 29, 2008

ಕೋತಿಗಳು ಸಾರ್ ಕೋತಿಗಳು...

ನಾನು ಏನೆಂದು ಹೇಳಲಿ...?
ಅಲ್ಲೊಂದಷ್ಟು ಜನ ಷೇರುಪೇಟೆಯಲ್ಲಿ ದಿವಾಳಿ
ಇಲ್ಲೊಂದಿಷ್ಟು ಜನ ಬ್ಯಾಂಕಿನಲ್ಲಿ ದಿವಾಳಿ
ನಡೆಯುತ್ತಿರಲು ಎಲ್ಲೆಲ್ಲೂ ದಿವಾಳಿಯ ಹಾವಳಿ
ಭಯವಾಗುತ್ತಿದೆ ಎನ್ನಲು ’ಹ್ಯಾಪಿ ದಿವಾಲಿ’

So..ನನ್ನ ಬ್ಲಾಗ್ ಓದುಗರಿಗೆಲ್ಲಾ ’ಹ್ಯಾಪಿ ದೀಪಾವಳಿ’


ಈ ಸಲದ ದೀಪಾವಳಿಗೆ ಎಲ್ಲೆಲ್ಲೂ ಡಮ್ ಡಮಾರ್ ಡಮ್ !!! ಕೆಲವೆಡೆ ಪಟಾಕಿದ್ದು ಇನ್ನು ಕೆಲವೆಡೆ ಆರ್ಥಿಕ ಕುಸಿತದ್ದು. ದೀಪಾವಳಿಗೂ ಮೊದಲೇ ಷೇರು ಮಾರ್ಕೆಟ್ ಮಾಡಿಬಿಟ್ಟಿವೆ ಜನರನ್ನು ದಿವಾಳಿ. ರಾಕೆಟಿನಂತೆ ಮೇಲೆರಿದ್ದ ಮಾರ್ಕೆಟ್ ಈಗ ಟುಸ್ ಆಗಿ ಯಾರ ಲೆಕ್ಕಾಚಾರಕ್ಕೂ ಸಿಗದಷ್ಟು ನೆಲ ಹಿಡಿದು ಕೂತಿದೆ. ಅದ್ಯಾವಾಗ ಏಳುತ್ತೊ ಅದ್ಯಾವಾಗ ಬೀಳುತ್ತೊ ನನಗಂತೂ ಅರ್ಥ ಆಗ್ತಿಲ್ಲ.. ನಿಮಗೂ ಆಗಿಲ್ವ..? ಹಾಗಾದ್ರೆ ಇಲ್ಲೊಂದು ಹಳೆಯ ಕಥೆ (ಇಂಗ್ಲೀಷ್ ಕಥೆಯೊಂದರ ಅನುವಾದ) ಇದೆ.. ಓದಿ.

ಅದೊಂದು ಹಳ್ಳಿ. ಒಂದು ದಿನ ಒಬ್ಬ ವ್ಯಾಪಾರಿ ತನ್ನ ಸಹಾಯಕನೊಂದಿಗೆ ಅಲ್ಲಿಗೆ ಬರುತ್ತಾನೆ. ಅಲ್ಲಿನ ಜನರನ್ನೆಲ್ಲಾ ಕರೆದು, ತಾನು ಕೋತಿಗಳನ್ನು ಒಂದಕ್ಕೆ 10 ರುಪಾಯಿಯಂತೆ ಖರೀದಿಸುವುದಾಗಿ ಹೇಳುತ್ತಾನೆ. ಹಳ್ಳಿಗರಿಗೆ ಸಂತಸ. ಹಳ್ಳಿಯಲ್ಲಿ ಸಾಕಷ್ಟು ಕೋತಿಗಳಿವೆ. ಹಳ್ಳಿಗರೆಲ್ಲಾ ಇರೋ ಕೆಲಸ ಬಿಟ್ಟು ಕೋತಿ ಹಿಡಿದು ತಂದರು. ವ್ಯಾಪಾರಿ ಸಾವಿರಾರು ಕೋತಿಗಳನ್ನ ಒಂದಕ್ಕೆ 10 ರುಪಾಯಿಯಂತೆ ಕೊಂಡುಕೊಂಡ. ಕೋತಿಗಳು ಕಮ್ಮಿಯಾಗಿ ಸಿಗುವುದು ಕಷ್ಟವಾದಾಗ ಜನರ ಕೋತಿ ಹಿಡಿಯುವ ಪ್ರಯತ್ನವೂ ಕಮ್ಮಿಯಾಯಿತು. ಈಗ ಆ ವ್ಯಾಪಾರಿ ಒಂದೊಂದು ಕೋತಿಗೆ 15 ರುಪಾಯಿ ಕೊಡುವುದಾಗಿ ಪ್ರಕಟಿಸುತ್ತಾನೆ. ಹಳ್ಳಿಗರು ತಮ್ಮ ಪ್ರಯತ್ನವನ್ನು ಮುಂದುವರೆಸಿ ಅಲ್ಲಿ ಇಲ್ಲಿ ಕೋತಿ ಹಿಡಿದು ತಂದು ಮಾರಿದರು. ಕ್ರಮೇಣ ಕೋತಿಗಳ ಅಭಾವದಿಂದ ಸಿಗದಾದಾಗ ಜನ ತಮ್ಮ ಪ್ರಯತ್ನ ಬಿಟ್ಟು ಹೊಲದ ಕೆಲಸದಲ್ಲಿ ಮಗ್ನರಾದರು. ಈಗ ವ್ಯಾಪಾರಿ ಒಂದಕ್ಕೆ 25 ರುಪಾಯಿ ಕೊಡುವುದಾಗಿ ಪ್ರಕಟಿಸುತ್ತಾನೆ. ಹಳ್ಳಿಗರು ಕಾಡು ಮೇಡು ಅಲೆದರೂ ಕೋತಿ ಹಿಡಿಯೊದು ಬಿಡಿ... ಕಣ್ಣಿಗೆ ಕಾಣಿಸುವುದೇ ಅಪರೂಪವಾಯಿತು. ಹಿಡಿಯಲು ಅಲ್ಲಿ ಅದ್ಯಾವ ಕೋತಿನೂ ಉಳಿದಿಲ್ಲ.

ಈಗ ಆ ವ್ಯಾಪಾರಿ ಕೋತಿಯೊಂದಕ್ಕೆ 50 ರುಪಾಯಿ ಪ್ರಕಟಿಸುತ್ತಾನೆ. ಆದರೆ ಕೆಲಸ ನಿಮ್ಮಿತ್ತ ತಾನು ಪಟ್ಟಣಕ್ಕೆ ಹೋಗಬೇಕಾಗಿದೆಯೆಂದೂ, ತನ್ನ ಅನುಪಸ್ಥಿತಿಯಲ್ಲಿ ತನ್ನ ಸಹಾಯಕನು ಜನರಿಂದ ಕೋತಿಗಳನ್ನು ಕೊಳ್ಳುವುದಾಗಿಯೂ ಹೇಳಿ ಹೋಗುತ್ತಾನೆ. ಹಳ್ಳಿಗರಿಗೆ ಒಂದೂ ಕೋತಿ ಸಿಗುತ್ತಿಲ್ಲ. ಈಗ ಆ ಸಹಾಯಕನು ಬೋನಿನಲ್ಲಿರೋ ಆ ಕೋತಿಗಳನ್ನು ಹಳ್ಳಿಗರಿಗೆ ತೋರಿಸುತ್ತಾ ಹೇಳುತ್ತಾನೆ, "ವ್ಯಾಪಾರಿ ಕೊಂಡ ಈ ಕೋತಿಗಳನ್ನು ನಾನು ನಿಮಗೆ 35 ರುಪಾಯಿಗೊಂದರಂತೆ ಮಾರುತ್ತೇನೆ. ವ್ಯಾಪಾರಿ ಮರಳಿದ ಬಳಿಕ ನೀವು ಅವನಿಗೆ 50 ರುಪಾಯಿಗೊಂದರಂತೆ ಮಾರಬಹುದು". ಹಳ್ಳಿಗರು ಹುಚ್ಚೆದ್ದು ಇದ್ದ ಉಳಿತಾಯವನ್ನೆಲ್ಲಾ ಖರ್ಚು ಮಾಡಿ, ಇನ್ನು ಕೆಲವರು ಸಾಲ ಸೋಲ ಮಾಡಿ ಕೋತಿ ಕೊಳ್ಳುತ್ತಾರೆ. ಮರುದಿನದಿಂದ ಸಹಾಯಕನ ಪತ್ತೆಯಿಲ್ಲ.. ವ್ಯಾಪಾರಿಯಂತೂ ಮೊದಲೇ ಇಲ್ಲ.. ಈಗ ಹಳ್ಳಿಯಲ್ಲಿ ಎಲ್ಲೆಲ್ಲೂ ಕೋತಿಗಳೇ ತುಂಬಿವೆ.

ಷೇರು ಮಾರ್ಕೆಟ್ ಕೂಡ ಹೀಗೆ. ದುಡ್ಡು ಮಾಡ್ಕೊಳ್ಳೊವ್ರು ಸಮಯಕ್ಕೆ ಸರಿಯಾಗಿ ಮಾಡ್ಕೊಂಡಿದ್ದಾರೆ..
ಆದರೆ ಕೈ ಸುಟ್ಟು ಕೊಂಡಿರುವವರೆಲ್ಲ 10ರ ಬೆಲೆಯ ಕೋತಿಯನ್ನು 35 ರುಪಾಯಿಗೆ ಕೊಂಡ್ಕೊಂಡು 50ಕ್ಕೆ ಮಾರುವ ಕನಸು ಕಂಡವರು. ಪಾಪ...ಈಗ ತಮಗಾದ ನಷ್ಟವನ್ನು ಸರಿತೂಗಿಸಲು ಷೇರುಗಳ ಬೆಲೆ ಏರುವುದನ್ನೇ ಎದುರು ನೋಡುತ್ತಾ ಇನ್ನೊಂದೆರಡು ವರ್ಷ ಕಾಯಬೇಕು, ಹಳ್ಳಿಗರು ವ್ಯಾಪಾರಿಯ ಬರವನ್ನು ಕಾದಂತೆ.

ಆದರೆ... ವ್ಯಾಪಾರಿ ಮರಳುತ್ತಾನಾ..? ಅವನು ಬರೊವರೆಗೂ ಕೋತಿಗಳನ್ನು ಸಾಕುತ್ತಾ ಕೂತಿರಲು ಸಾಧ್ಯನಾ..? ಹ್ಹಾ...... ಆ ವ್ಯಾಪಾರಿ ಬಂದರೆ ನನಗೂ ತಿಳಿಸಿ... ನನ್ನ ಬಳಿಯಲ್ಲೂ ಹಲವು ಕೋತಿಗಳಿವೆ.

ಹ್ಯಾಪೀ ದಿವಾಳಿ(ಲಿ)