1. ಮಳೆ ನಿಂತು ಹೋದ ಮೇಲೆ...
ದಾಂಪತ್ಯದ ಮೊದಲ ದಿನಗಳವು. ಅವನು, ಆಫೀಸಿಗೆ ಹೊರಡಲು ರೆಡಿಯಾಗುತ್ತಿದ್ದಾನಷ್ಟೆ. ಅವಳು, ಬೇಗನೆ ಎದ್ದು ತಯಾರಿಸಿದ ಬಿಸಿಬಿಸಿ ಉಪಾಹಾರದೊಂದಿಗೆ ಡೈನಿಂಗ್ ಟೇಬಲಿನಲ್ಲಿ ಅವನಿಗಾಗಿ ಕಾಯುತ್ತಿದ್ದಾಳೆ.
3-4 ತಿಂಗಳುಗಳ ಬಳಿಕ, ಅವನು ಆಗಲೇ ರೆಡಿಯಾಗಿದ್ದು ತಿಂಡಿಗಾಗಿ ಕಾಯುತ್ತಿದ್ದಾನೆ. ಆದರೆ ಅವಳಿನ್ನೂ ಕಿಚನಿನಲ್ಲಿ ಬ್ಯುಸಿಯಾಗಿದ್ದಾಳೆ. ಕೆಲವೊಮ್ಮೆ ಅವಳು ತೀರಾ ಬ್ಯುಸಿ(ಬಿಸಿ)ಯಾದಾಗ ಅವನು ಬ್ರೆಡ್‍ಜ್ಯಾಮ್ ಇಲ್ಲವೆ ಕಾರ್ನ್‍ಫ್ಲೇಕ್ಸ್‍ಗೇ ಶರಣಾಗಿದ್ದಾನೆ.
6-7 ತಿಂಗಳ ಬಳಿಕ, ಅವನು ತಾನೇ ರೆಡಿ ಮಾಡಿಕೊಂಡ ತಣ್ಣಗಿನ ಸೀರಿಯಲನ್ನು ತಿನ್ನುವಾಗ, ಅವಳು ಮಲಗಿದಲ್ಲೇ ಮುಸುಕು ಸರಿಸಿ ಹೇಳುತ್ತಾಳೆ "ನೀವು ಮಾಡುವ ತಟ್ಟೆ ಚಮಚದ ಸದ್ದಿಗೆ ನನಗೆ ಎಚ್ಚರವಾಗಿ ನಿದ್ರಾ ಭಂಗವಾಗುತ್ತಿದೆ...ಸದ್ದು ಮಾಡದೆ ತಿಂದು ಹೊರಡಿ."
------------------------------------------------------------
2. ತನ್ನದಲ್ಲದ ಹಾದಿಯಲ್ಲಿ...
ಕೈ ತುಂಬಾ ಸಂಬಳದ ಹೊಸ ಕೆಲಸಕ್ಕೆ ಸೇರಿದ ಅವನ ಉತ್ಸಾಹ ತುಂಬಾ ದಿನ ಉಳಿಯಲಿಲ್ಲ. ಕೈ ತುಂಬಾ ಸಂಬಳದ ಜೊತೆಗೆ ಬಂತು ಮೈ ತುಂಬಾ ಕೆಲಸ, ಟಾರ್ಗೆಟ್, ಡೆಡ್‍ಲೈನು, ಡೆಲಿವೆರಿ, ಮೀಟಿಂಗು, ಪರ್ಫಾರ್ಮೇನ್ಸ್ ರೇಟಿಂಗು...ಊಫ್....
ಅವನೀಗ ಆಸ್ಪತ್ರೆಯ ಬೆಡ್ಡಿನಲ್ಲಿದಾನೆ.
ಅವನಿಗೆ ಕೆಲಸದ ಒತ್ತಡದಿಂದ ರಕ್ತದ ಒತ್ತಡ ಜಾಸ್ತಿಯಾಗಿ ಸ್ಟ್ರೋಕ್ ಹೊಡೆದಿದೆ. ದೇಹದ ಏಡಭಾಗದಲ್ಲಿ ಸ್ವಾದೀನವಿಲ್ಲ. ಈಗ ಎಡಗೈಯ ರಿಪೇರಿಗೆ ಬಲಗೈನಲ್ಲಿ ಪಡೆದ ’ಕೈ ತುಂಬಾ’ ಸಂಬಳ ಸೋರಿಹೋಗಿದೆ.
ಅವನ ಮನದಾಳದಲ್ಲಿ ನೋವು ತುಂಬಿದ ಪ್ರಶ್ನೆಯೊಂದು ಕಾಡುತ್ತಿದೆ....."ಈಸ್ ಇಟ್ ವರ್ಥ್..?"
-------------------------------------------------------------
3. ಬುದ್ದ ಹೇಳಿದ್ದು...
ಬುದ್ದನ ಕುರಿತಾದ ಸಾಕಷ್ಟು ಪುಸ್ತಕಗಳನ್ನು ಓದಿ ತಲೆಕೆಡಿಸಿಕೊಂಡು ನಿದ್ರೆ ಹೋಗಿದ್ದ ಅವನು ಅಂದು ಮದ್ಯರಾತ್ರಿಯಲ್ಲಿ ದಿಡೀರನೆ ಎದ್ದು ಕುಳಿತ...ಬುದ್ದನಂತಾಗಬೇಕೆಂಬ ’ಆಸೆ’ಯಿಂದ.
ಆದರೆ ’ಆಸೆಯೇ ದುಃಖಕ್ಕೆ ಮೂಲ’ ಎಂದು ಪುಸ್ತಕದಲ್ಲಿ ಬುದ್ದ ಹೇಳಿದ್ದು ನೆನಪಾಗಿ, ಹೊದ್ದು ಮಲಗಿದ್ದ ಮರುಕ್ಷಣದಲ್ಲಿ.
(ಇದು ಮಾತ್ರ ಯಾವಾಗಲೋ ಓದಿದ್ದ ಹನಿಗವನವೊಂದರ ರೂಪಾಂತರ)
ತೂಗುಮಂಚ
6 years ago