Thank you for visiting...

Sunday, April 5, 2009

ಮರೆಯುವ ಮುನ್ನ...

ಹೊಸ ವರುಷವ ಹೊಸ ಹರುಷವ ಮರಳಿ ಮರಳಿ ತರುತಿದೆ...
ಯುಗ ಯುಗಾದಿ ಕಳೆದರೂ...

‘ಪ್ರಕೃತಿ’ಯ ಓದುಗರಿಗೆಲ್ಲಾ... ಯುಗಾದಿ ಹಬ್ಬದ ಶುಭಾಶಯಗಳು.
- - - - - - - - - - - - - - - - - - - - - -



ಹೊಸ ದಿನ... ಹೊಸ ಗಾಳಿ... ಹೊಸ ಆಫೀಸು... ಹೊಸ ಟ್ರಾಫಿಕ್... ಹೊಸ ಜನ-ಜೀವನ... ಅವನಿಗೆ ಹಳೆಯದೆಲ್ಲವೂ ಮತ್ತೊಮ್ಮೆ ಹೊಸದಾಗಿ ಆಗಲೇ ತಿಂಗಳುಗಳು ಸರಿದಿದೆ. ಅಲ್ಲಿ ಅಂದು ಕಾಲಚಕ್ರದ ಸುಳಿಯಲ್ಲಿ ಹೊಸಹಾದಿ ಕಂಡಾಗ, ಕಂಫರ್ಟ್ ಝೊನಿನ, ಐಷಾರಾಮದ(?) ಆ ಬದುಕಿಗೊಂದು ವಿದಾಯ ಹೇಳಿ ಬಂದಿದ್ದಾನೆ. ಅವನ ಬದುಕು ಮತ್ತೊಮ್ಮೆ ಬದಲಾಗುತ್ತಿದೆ.

ಚಳಿ, ಗಾಳಿ, ಮಳೆ, ಬಿಸಿಲು, ಅದೇನೇ ಇದ್ದರೂ "ಗುಡ್ ವೆದರ್" "ಬ್ಯಾಡ್ ವೆದರ್" "ಸನ್ ಹ್ಯಾಸ್ ಕಮ್ ಔಟ್ ಟುಡೈ" ಎಂಬ ಅಲ್ಲಿನ ಅನುದಿನದ ಮಂತ್ರಗಳು ಈಗ ಮರೆತು ಹೋಗಿದೆ. ರೆಸ್ಟೋರೆಂಟಿನಲ್ಲಿ "ನೊ ಮೀಟ್, ನೋ ಚಿಕನ್" ಎಂದು ಒತ್ತಿ ಹೇಳುವ ಅನಿವಾರ್ಯತೆ ಈಗಿಲ್ಲ. ಅಲ್ಲಿನ ಮೈ ಕೊರೆವ ಚಳಿಯಲ್ಲಿ ಕಾಡುತ್ತಿದ್ದ "ಬೇಕಿತ್ತಾ ಈ ಜೀವನ" ಅನ್ನೋ ಪ್ರಶ್ನೆ ಈಗಿಲ್ಲ. ಆದರೆ ಈಗ ಕೊರೆಯುತ್ತಿರುವುದು ಮನದಲ್ಲಿ ಉಳಿದು ಹೋದ ಅಲ್ಲಿನ ಸವಿ ನೆನಪುಗಳು.

ಅಲ್ಲಿ ಸುಮಾರು ಮೂರು ವರುಷಗಳ ಜೀವನ. ನೆನಪುಗಳನ್ನು ಸವಿಯಾಗಿಸಿದ ಬಂಧುಗಳಂತ್ತಿದ್ದ ಸಹೋದ್ಯೋಗಿ ಮಿತ್ರರು. ಜೊತೆಜೊತೆಯಾಗಿ ಕಳೆದ ಕ್ಷಣಗಳು, ಆಚರಿಸಿದ ಹಬ್ಬ, ಸಮಾರಂಭ, ಬರ್ತ್‍ಡೆ, ಬೇಬಿ-ಷವರಿನಂತಹ ಪಾರ್ಟಿಗಳು, ವಾರಾಂತ್ಯದ ಕ್ರಿಕೆಟ್, ವಾಲಿಬಾಲ್, ಸೈಕ್ಲಿಂಗ್ ಅಲ್ಲದೆ ಸಮ್ಮರ್‌ನಲ್ಲಿ ಆಡುತ್ತಿದ್ದ ಟೆನ್ನಿಸ್, ಸಾಫ್ಟ್‍ಬಾಲ್‌ನಂತಹ ಲೀಗ್ ಮ್ಯಾಚುಗಳು, ಆಗಾಗ್ಗೆ ನಡೆಯುತ್ತಿದ್ದ ಪೊಕರ್ ನೈಟ್ಸ್, ನಾಟಕ, ಶಾರ್ಟ್‍ಫಿಲಂ‍ನಂತಹ ಚಟುವಟಿಕೆಗಳು, ಪಾರ್ಕಿನಲ್ಲಿ ನಡೆಸಿದ ದೋಸ ಕ್ಯಾಂಪ್, ಗ್ರಿಲ್ಲ್‍ನಂತಹ ಗೆಟ್ಟುಗೆದರ್‍ಸ್‍ಗಳೆಲ್ಲವೂ ಅಂದಿನ ವಾಸ್ತವ. ಇಂದಿನ ವರ್ತಮಾನದಲ್ಲಿ ಕೇವಲ ನೆನಪುಗಳಾಗಿ ಉಳಿದು ಭವಿಷ್ಯತ್ತಿಗಾಗಿ ಮನದ ಡೈರಿಯ ಪುಟವನ್ನು ಸೇರಿದೆ.

ಕೆಲವೊಂದು ನೆನಪುಗಳಿವೆ. ಬದುಕು ಬದಲಾದ ಕ್ಷಣದಲ್ಲಿ ಹೊಸತು ಹಳೆದರ ವ್ಯತ್ಯಾಸ ಹೆಚ್ಚಿಸಿ ವಾಸ್ತವದ ಬದುಕನ್ನೇ ಕಹಿಯಾಗಿಸುವಂತಹ ನೆನಪುಗಳವು. ಇಲ್ಲಿ ಎ.ಟಿ.ಎಮ್‍ನ ಮುಂದೆ ಉದ್ದುದ್ದ ಕ್ಯೂ ನಿಲ್ಲುವಾಗ ಅವನಿಗೆ ಅಲ್ಲಿನ ಡ್ರೈವ್-ಥ್ರೂ ಎ.ಟಿ.ಎಮ್‍ನ ನೆನಪಾಗುತ್ತದೆ. ಬ್ಯಾಂಕಿಗೆ ಹೋದಾಗ ಅಲ್ಲಿನ ಜನ ಜಂಗುಳಿ ಕಂಡು ಬೆರಗಾಗಿ ಕೊನೆಗೆ ಯಾರ್‍ಓ ಹೇಳಿದಂತೆ ಟೋಕನೊಂದನ್ನು ತೆಗೆದುಕೊಂದು ತನ್ನ ಸರದಿಗಾಗಿ ಕಾಯುವಾಗ... ಅಲ್ಲಿ ಚೇಸ್ ಬ್ಯಾಂಕಿನ ಬಾಗಿಲು ತೆರೆದು ಒಳ ನಡೆಯುತ್ತಿದ್ದಂತೆ "ಹಾ...ಯಿ" ಎಂದು ಕರೆದು "ಹವ್ ಕೇನ್ ಐ ಹೆಲ್ಪ್ ಯು ಟುಡೈ" ಎಂದು ಕೇಳುವ ನಗುಮೊಗದ ಆ ಲಿಸಾಳ ನೆನಪಾಗಿ ಮನಸ್ಸು ಮುದುಡುತ್ತದೆ.. ಲೈಸೆನ್ಸ್, ಫೋನ್ ಕನೆಕ್ಷನ್ ಇತ್ಯಾದಿಗಳಿಗೆ ಇಲ್ಲಿನ ಕಚೇರಿಗಳಲ್ಲಿ ತಮ್ಮ ಕೆಲಸವಾಗಲು ಗುಡ್ಡ ಅಗೆದು ಇಲಿ ಹಿಡಿಯುವ ಶ್ರಮ ಪಟ್ಟಾಗ... ಅಲ್ಲಿ ಮನೆಯಲ್ಲೇ ಕೂತು ಫೋನಿನಲ್ಲೊ ಅಥವಾ ಇಂಟೆರ್‌ನೆಟ್ಟಿನಲ್ಲೇ ಮುಗಿದುಹೋಗುವ ಕಸ್ಟಮರ್ ಓರಿಯೆಂಟೆಡ್ ಸರ್ವಿಸಿನ ನೆನಪು ಹಾಯುತ್ತದೆ. ಅವ್ಯವಸ್ಥಿತ ಟ್ರಾಫಿಕ್, ಅದನ್ನು ನೋಡಿಯೂ ನೋಡದಂತೆ ಇನ್ನೇಲ್ಲೋ ನೋಡುತ್ತಾ ಪೀ, ಪೀ ಎಂದು ಊದುವ ನಿಸ್ಸಹಾಯಕ ಪೋಲಿಸ್ ಮಾಮನನ್ನು ಕಂಡಾಗ ಅಲ್ಲಿನ ಟ್ರಾಫಿಕ್ ಸೆನ್ಸ್, ಮಾಮಗಳಿಗಿರುವ ಕರ್ತವ್ಯ ಪ್ರಜ್ನೆ, ಅಧಿಕಾರ, ಚುರುಕುತನದ ಚಿತ್ರಣ, ಬೇಡ ಬೇಡವೆಂದರೂ ಕಣ್ಣ ಮುಂದೆ ತೇಲಿ ಬಂದು ಅಲ್ಲಿನ ನೆನಪುಗಳನ್ನು ಮತ್ತಷ್ಟು ಹಸಿಯಾಗಿಸುತ್ತದೆ.

ನಿನ್ನೆಗಳು ಮಸುಕಾಗದಿದ್ದರೆ ನಾಳೆಗಳಿಗೆ ಪ್ರತಿಭೆಯಿಲ್ಲ. ಅಲ್ಲಿನ ಬದುಕು ಅಲ್ಲಿಗೆ...ಇಲ್ಲಿನ ಬದುಕು ಇಲ್ಲಿಗೆ. ಇಲ್ಲಿ ಅಪ್ಪ, ಅಮ್ಮ, ಅಕ್ಕಂದಿರ ಆರೈಕೆಯಿದೆ. ಆಗೊಮ್ಮೆ ಈಗೊಮ್ಮೆ ಕುಣಿದು ಕುಪ್ಪಣಿಸಲು ಮಲೆನಾಡಿನ ಜಡಿಮಳೆಯಿದೆ. ಮಳೆಯಲ್ಲಿ ನೆನೆದಾಗ ಆಹ್ಲಾದಿಸಲು ಕಾಕನ ಗೂಡಂಗಡಿಯಲ್ಲಿ ಸಿಗುವ ಬಿಸಿ ಬಿಸಿ ಚಹವಿದೆ. ಸಾಲು ಸಾಲಾಗಿ ಬರುವ ಹಬ್ಬ ಹರಿದಿನಗಳ ಸಡಗರ ಸಂಭ್ರಮವಿದೆ. ಮೈ ಜಡ್ದು ಹಿಡಿದು ಕೂತಾಗ ಬಾಯಾಡಿಸಲು ರಸ್ತೆ ಬದಿಯ ಚುರುಮುರಿ, ಪಾನಿಪೂರಿಯ ಗಾಡಿಗಳಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವನಿಗೆ ನಿನ್ನೆಯ ನೆನಪುಗಳಲ್ಲೆ ಕಳೆದುಹೋಗದೆ ನಾಳೆಯ ಕನಸುಗಳಲ್ಲಿ ಖುಷಿಪಡುವ ಮನಸ್ಸಿದೆ.
ಈಗೆಲ್ಲಾ ಮನೆಯ ನೆನಪಾದಾಗ ರಾತ್ರಿಯ ಸ್ಲೀಪರ್ ಬಸ್ಸ್ ಹತ್ತಿ ಮೊಬೈಲಿನ ಇಯರ್ ಫೋನ್ ಕಿವಿಗೆ ಸಿಕ್ಕಿಸಿ ಮಲಗುತ್ತಾನೆ. ಅದರಲ್ಲಿ ಅವನಿಷ್ಟದ ಹಾಡು.... ಮುಸ್ಸಂಜೆ ಮಾತಿನ ಪ್ರದೀಪಣ್ಣನ ಆ ಸಕ್ಕತ್ ಹಾಟ್ ಹಾಡು...

ಎನಾಗಲಿ... ಮುಂದೆ ಸಾ...ಗು ನೀ,
ಬಯಸಿದ್ದೆಲ್ಲಾ ಸಿಗದು ಬಾ...ಳಲಿ,
ಬಯಸಿದ್ದೆಲ್ಲಾ..... ಸಿಗದು ಬಾಳಲಿ,
ಓ..ಓ..ಓ
ನನ್ನಾಣೆ ನನ್ನ ಮಾತು ಸುಳ್ಳಲ್ಲ...