ನನ್ನ ಕನಸುಗಳೇ ಹೀಗೆ! ಆದಿ-ಅಂತ್ಯ ಇಲ್ಲದವು.
ದಿಂಬಿಗೆ ತಲೆ ಇಟ್ಟೊಡನೆಯೆ ತಾ ಮುಂದು ನಾ ಮುಂದು ಎಂದು ಪೈಪೋಟಿಯಲ್ಲಿ ಬರುವ ಅವಕ್ಕೊಂದು ತಲೆ ಬುಡ ಅಂತ ಇರುವುದಿಲ್ಲ. ನಿಜ ಜೀವನದಲ್ಲಿ ಊಹೆಗೂ ಸಿಲುಕದ ಕ್ಷಣಗಳನ್ನು ಕನಸಿನಲ್ಲಿ ಕಂಡಿದ್ದೇನೆ. ಈ ಕ್ಷಣದಲ್ಲಿ ನನ್ನ ಮನೆಯ ಸೋಫಾದಲ್ಲಿ ಗೌತಮ ಬುದ್ದನ ಜೊತೆ ಕುಳಿತು ಟಿ.ವಿಯಲ್ಲಿ ಕ್ರಿಕೆಟ್ ನೋಡುತ್ತಿದ್ದರೆ, ಮರುಕ್ಷಣದಲ್ಲಿ ಬಿಪಾಶಳ ಜೊತೆ
ಇನ್ನೇನೋ(?) ಮಾಡುತ್ತಿರುತ್ತೇನೆ..... ಹೋಗಲಿ ಬಿಡಿ.
ಆದರೆ ನಾನು ಹೇಳಲು ಹೊರಟಿರುವ ಇಂದಿನ ಕನಸು ಮಾತ್ರ ಎಂದಿಗಿಂತ ವಿಭಿನ್ನವಾದದ್ದು.
ಅಂದು ನಾನು ಕಾಲೇಜಿನ ಪ್ರಾಣಿವಿಜ್ನಾನ ಪ್ರಯೋಗಾಲಯದಲ್ಲಿದ್ದೆ. ನನ್ನ ಹೊರತಾಗಿ ಬೇರೆ ಯಾರೂ ಅಲ್ಲಿಲ್ಲ. ಸೂಕ್ಷ್ಮದರ್ಶಕವೊಂದರ ಮುಂದೆ ಕುಳಿತು ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದೇನೆ. ಅತೀವ ಎಕಾಗ್ರತೆಯಿಂದ ನೋಡುತ್ತಿದ್ದ ನನಗೆ ಯಾವುದೋ ಜೈವಿಕ ಅಣುಗಳು, ಡಿ.ಎನ್.ಏಗಳು ಕಾಣಿಸುತ್ತಿವೆ. ಆದರೆ ಅವು ಯಾವುದೋ ಒಂದು ಆತಂಕದ ಕ್ಷಣದಲ್ಲಿ ಪ್ರಾಣ ಭೀತಿಯಿಂದ ತತ್ತರಿಸಿ ಚೆಲ್ಲಾಪಿಲ್ಲಿಯಾಗಿ ಓಡಾಡುತ್ತಿರುವಂತೆ ಭಾಸವಾಗುತ್ತಿದೆ. ಯಾವ ಜೀವಿಯ ಅಣುಗಳಿವು..? ಯಾಕೆ ಹೀಗೆ ಆತಂಕ..? ತಿಳಿದುಕೊಳ್ಳುವ ಕುತೂಹಲದಿಂದ ಸೂಕ್ಷ್ಮದರ್ಶಕದ ಲೆನ್ಸನ್ನು ನಿಧಾನವಾಗಿ ಜೂಮೌಟ್ (Zoom Out) ಮಾಡಿದೆ. ಓಹ್...ಆ ಜೀವಾಣುಗಳು ಒಂದು ಬಣ್ಣದ ಚಿಟ್ಟೆಯದ್ದು. ಬಣ್ಣ ಬಣ್ಣದ ಆ ಚಿಟ್ಟೆಯು ಪ್ರಕೃತಿಯ ಕಲಾತ್ಮಕ ಸೃಷ್ಟಿಯ ಸ್ವರೂಪವೆನ್ನಬಹುದು. ಅಂಥಾ ಸುಂದರ ಚಿಟ್ಟೆಯ ಕಣ್ಣುಗಳಲ್ಲಿ ಯಾವುದೋ ಯಾತನೆ, ಜೀವಭಯ. ಯಾಕಿರಬಹುದು..? ಇನ್ನೊಮ್ಮೆ ನಿದಾನವಾಗಿ ಜೂಮೌಟ್ ಮಾಡಿದೆ. ಓಹ್... ಚಿಟ್ಟೆಯು ಒಂದು ಪುಟ್ಟ ಹಕ್ಕಿಯ ಕೊಕ್ಕಿನಲ್ಲಿ ಬಂದಿಯಾಗಿದೆ. ಹಕ್ಕಿಯು ಚಿಟ್ಟೆಯ ಅಂತಿಮ ಹೋರಾಟ ಶಾಂತವಾಗುವುದನ್ನೇ ಕಾಯುತ್ತಿದೆ. ನಿಸರ್ಗದ ಆಹಾರ ಸರಪಳಿಯ ದೃಶ್ಯವನ್ನು ನೋಡಲಾಗದೆ ಮತ್ತೊಮ್ಮೆ ಜೂ..ಮೌ...ಟ್ ಮಾಡಿದೆ.... ಹಕ್ಕಿಯು ಒಂದು ಸಣ್ಣ ಎಲೆಯ ಮೇಲಿದೆ. ಇನ್ನೊಮ್ಮೆ ಜೂ...ಮೌ...ಟ್... ಅದು ಸಂಪಿಗೆ ಗಿಡದ ಎಲೆಯ ಮೇಲೆ ಕೂತಿದೆ. ಜೂ...ಮೌ...ಟ್... ಅದೊಂದು ಉದ್ಯಾನವನ. ಸಂಪಿಗೆ, ಗುಲಾಬಿ, ಜಾಜಿ..ಇನ್ನೂ ನಾನಾ ಬಗೆಯ ಗಿಡಗಳಿವೆ ಆ ಉದ್ಯಾನವನದಲ್ಲಿ. ಇಷ್ಟು ಸುಂದರ ಉದ್ಯಾನವನ ಯಾವುದಿದು..? ಕಬ್ಬನ್ ಪಾರ್ಕಂತೂ ಅಲ್ಲ. ಎಕೆಂದರೆ ಇಲ್ಲೆಲ್ಲೂ ಪ್ರೇಮಿಗಳ "ರಸ"ಮಂಜರಿ ಕಾರ್ಯಕ್ರಮ ಕಾಣುತ್ತಿಲ್ಲ. ಮತ್ತಷ್ಟು ಜೂ..ಮೌ..ಟ್ ಮಾಡಿ ನೋಡಿದಾಗ ಆ ಉದ್ಯಾನವನ ನೀರಿನಿಂದ ಆವೃತ್ತವಾಗಿರುವುದು ಕಾಣಿಸುತ್ತಿದೆ. ಹೌದು ಅದೊಂದು ದ್ವೀಪವಿರಬಹುದು...ಮುಂದಕ್ಕೆ ಜೂಮೌಟ್ ಮಾಡಿದಷ್ಟೂ ಬರೇ ನೀರು ಕಾಣಿಸುತ್ತಿದೆ. ಬಹುಶಃ ಆ ದ್ವೀಪವಿರುವುದು ಸಮುದ್ರದಲ್ಲಿ... ಈಗ ವೇಗವಾಗಿ ಜೂಮೌಟ್ ಮಾಡಿದೆ. ಎಲ್ಲವೂ ವೇಗವಾಗಿ ನನ್ನ ದೃಷ್ಟಿಯಿಂದ ದೂರವಾಗುತ್ತಿದೆ. ಅದರ ವೇಗಕ್ಕೆ ನನ್ನ ದೃಷ್ಟಿಯು ಹೊಂದಿಕೊಳ್ಳಲಾಗದೆ ಯಾಕೊ ತಲೆ ಸುತ್ತುವಂತೆ ಅನ್ನಿಸುತ್ತಿದೆ.. ಭೂಮಿಯ ಗುರುತ್ವಾಕರ್ಷಣ ವಲಯದಿಂದ ಹೊರಬಂದಂತೆ... ಗಾಳಿಯಲ್ಲಿ ತೇಲುವಂತೆ.... ಊಫ್.. ಎನಾಗುತ್ತಿದೆ ನನಗೆ..? ಸ್ವಲ್ಪ ಹೊತ್ತಿನ ಈ ಭ್ರಾಂತಿಯ ಬಳಿಕ ಚೆಂಡಿನಂಥ ವಸ್ತುವೊಂದು ಅಸ್ಪಷ್ಟವಾಗಿ ಕಾಣಿಸುತ್ತಿದ್ದು, ಬರಬರುತ್ತಾ ಅದು ಸ್ಪಷ್ಟವಾಗಿದೆ. ಅರೆ..ಇದು ’ನಾಸ’ದವರು ತೆಗೆದ ಭೂಮಿಯ ಚಿತ್ರದಂತಿದೆಯಲ್ಲಾ..... ಹೌದು, ನಾನು ನೋಡುತ್ತಿರುವುದೇ ಆ ಭೂಮಂಡಲವನ್ನು. ಚಿತ್ರವನ್ನಲ್ಲ. ಸಕಲ ಜೀವಿಗಳಿಗೂ ನೆಲೆಯಾಗಿ ನಿಂತು, ಎಲ್ಲವನ್ನೂ ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ತನ್ನದೆನೂ ಇಲ್ಲವೆಂಬಂತಿರುವ ಆ ಪ್ರಥ್ವಿಯನ್ನು ಧನ್ಯತಾ ಭಾವನೆಯಿಂದ ನೋಡುತ್ತಾ ಕುಳಿತುಬಿಟ್ಟಿದ್ದೆ. ನನ್ನ ಕೈ ಬೆರಳುಗಳು ನನ್ನ ಅರಿವಿಲ್ಲದೆಯೇ ಟೈಮ್ ಅಪ್ ಎಂದು ಜೂಮೌಟ್ ಮಾಡಿದ್ದವು. ಫೊಟೊಗೆ ಪೂಸ್ ಕೊಡಲು ಬಂದಂತೆ ನೆರೆ ಹೊರೆಯ ಮಂಗಳ, ಶುಕ್ರರು ಭೂಮಿಯ ಅಕ್ಕಪಕ್ಕದಲ್ಲಿ ನಿಂತಿದ್ದಾರೆ. ನೋಡುತ್ತಿದ್ದಂತೆ ಗುರು, ರಿಂಗು ಧರಿಸಿದ ಶನಿ....ವಾವ್.. ಇಡೀ ಸೌರಮಂಡಲ ಕಾಣುತ್ತಿದೆ.
ಈ ರೀತಿಯ ಸೌರಮಂಡಲಗಳು ಅದೆಷ್ಟೋ ಇವೆಯಂತೆ. ಲಂಡನಿನ ವಿಜ್ನಾನಿಗಳು ಇತರ ಸೌರಮಂಡಲದಲ್ಲಿ ಭೂಮಿಯಲ್ಲಿರುವಂತೆ ಬುದ್ದಿಜೀವಿಗಳಿರಬಹುದೆಂದು ಊಹಿಸಿ "ಓಹೋಯಿ... ಭೂಮಿಯೆಂಬುದೊಂದಿದೆ, ಇಲ್ಲಿ ನಾವು ಮಾನವರಿದ್ದೇವೆ, ಇತರ ಜೀವಿಗಳಿವೆ, ಪ್ರಕೃತಿಯಿದೆ,....." ಎಂದು ಅನಂತ ವಿಶ್ವಕ್ಕೊಂದು 30 ಸೆಕೆಂಡುಗಳ ಜಾಹಿರಾತನ್ನು ಕಳಿಸಿದ್ದಾರಂತೆ. ಆ ಜಾಹಿರಾತಿನ ತರಂಗಾಂತರ ವೇಗವು 9 ಸೆಕೆಂಡುಗಳಲ್ಲಿ ಚಂದ್ರನನ್ನು ತಲುಪಿ, 9 ನಿಮಿಷದೊಳಗಾಗಿ ಈ ಸೂರ್ಯಮಂಡಲವನ್ನೇ ದಾಟಿ ಹೋಗುವ ಸಾಮರ್ಥ್ಯದ್ದು. 24 ಜ್ಯೋತಿರ್ವಷಗಳಷ್ಟು ದೂರ ಕ್ರಮಿಸಬಲ್ಲ ಆ ಜಾಹಿರಾತು ಇತರ ಯಾವುದೇ ಸೌರಮಂಡಲದಲ್ಲಿ ಇರಬಹುದೆನೋ ಎಂದು ಊಹಿಸಲಾದ ಬುದ್ದಿಜೀವಿಗಳನ್ನು ತಲುಪಿದರೆ, ಅವರು ಅದನ್ನು ಡೌನ್ಲೋಡ್ (download) ಮಾಡಿ ಭೂಮಿಗೆ ಪ್ರತ್ಯುತ್ತರ ಕಳುಹಿಸಬಹುದಂತೆ.
ಯಾವಾಗಲೊ ನ್ಯೂಸ್ ಪೇಪರಿನಲ್ಲಿ ಓದಿದ್ದೊಂದು ಈಗ ಸರಿಯಾದ ಸಮಯದಲ್ಲಿ ನೆನಪಿಗೆ ಬಂದಿದೆ. ಈಗ ಸೂಕ್ಷ್ಮದರ್ಶಕದಲ್ಲಿ ಸೌರಮಂಡಲವನ್ನು ನೊಡುತ್ತಿರುವ ನನಗೆ, ಗ್ಯಾಲಾಕ್ಸಿಯನ್ನು ಹುಡುಕಿ ಆ ಬುದ್ದಿಜೀವಿಗಳಿರುವ ಸೌರಮಂಡಲ ಸಿಕ್ಕಿದರೆ, ಆ ಮೂಲಕ ವಿಜ್ನಾನಿಗಳ ಸಂಶೋದನೆಗೆ ಸಹಕರಿಸಬಹುದೇನೋ... ಅನ್ನುವ ಯೋಚನೆ ಬಂದಿದ್ದೇ ತಡ ಹಿಂದೆ ಮುಂದೆ ನೋಡದೆ ಹುಡುಕಲು ಸುರು ಮಾಡಿದೆ.
ಜೂಮೌಟ್ ಜೂಮ್‍ಇನ್ ಮಾಡುತ್ತಾ ಸುಮಾರು ಗ್ರಹಗಳನ್ನು ನೋಡಿದ್ದಾಯಿತು....ಎಲ್ಲಿಯೂ ಇಂಡಸ್ಟ್ರಿಯ ಅನಿಲ ಬಿಡುಗಡೆಯ ವಾಸನೆಯಗಲಿ, ಶಬ್ದ ಮಾಲಿನ್ಯವಾಗಲಿ, ಕಪ್ಪು ಹೊಗೆಯಾಗಲಿ ಕಾಣಿಸಲ್ಲಿಲ್ಲ. ಆದ್ದರಿಂದ ಇಲ್ಲಿ ಮನುಷ್ಯರಿಲ್ಲ ಎಂದು ಖಾತರಿಪಡಿಸಿಕೊಂಡೇ ಮುಂದಕ್ಕೆ ಹೊಗುತ್ತಿದ್ದೆ. ಹಾರುವ ತಟ್ಟೆಗಳಾದರೂ ಕಾಣಿಸಬಹುದೆನೂ ಅಂತ ಆಸೆಯಿಂದ ನೋಡುತ್ತಿದ್ದೆ. ಅದೂ ಕೂಡ ಕಾಣಿಸದೆ ನಿರಾಸೆಯಾಗಿತ್ತು. ಇನ್ನೇನು ಸೂಕ್ಷ್ಮದರ್ಶಕದ ಕಣ್ಣನ್ನು ಭೂಮಿಯತ್ತ ವಾಪಾಸು ತಿರಿಗಿಸೋಣ ಅಂದುಕೊಳ್ಳುವಷ್ಟರಲ್ಲಿ ದೂರದಲ್ಲೆಲ್ಲೋ ಅತೀ ಸಣ್ಣ ದನಿಯಲ್ಲಿ ಸಂಗೀತದಂತೆ ಕೇಳಿಸುತ್ತಿದೆ. ತಕ್ಷಣವೇ ಸೂಕ್ಷ್ಮದರ್ಶಕವನ್ನು ಹತ್ತಿರದಲ್ಲೇ ಇದ್ದ ಆಯತಾಕಾರದ ಗ್ರಹವೊಂದರ ಮೇಲೆ ಫೊಕಸ್ ಮಾಡಿದೆ... ಅದರ ಹತ್ತಿರ ಹೋದಂತೆಲ್ಲಾ ಸಂಗೀತದ ದ್ವನಿ ಜೋರಾಗುತ್ತಿದೆ... ಹೌದು ಇದೇ ಗ್ರಹ.. ಇಲ್ಲಿ ಜೀವಿಗಳಿರುವುದು ಗ್ಯಾರಂಟಿ ಅನ್ನಿಸುತ್ತಿದೆ...ಆ ಗ್ರಹವನ್ನು ಮೈಯೆಲ್ಲಾ ಕಣ್ಣಾಗಿ ನೋಡುತ್ತಿದ್ದೇನೆ... ಅಲ್ಲಿ ಜೀವಿಗಳೆಲ್ಲೂ ಕಾಣಿಸುತ್ತಿಲ್ಲ...ಆದರೆ ಸಂಗೀತ ಸ್ಪಷ್ಟವಾಗಿ ಕೇಳಿಸುತ್ತಿದೆ....ಅದೂ ಮನೋಮೂರ್ತಿಯವರ ಸಂಗೀತದಂತೆ ಇಂಪಾಗಿದೆ...ಹಾಗದರೆ ಇಲ್ಲಿನ ಜೀವಿಗಳು ಪಾಶ್ಚಿಮಾತ್ಯ ಕಲ್ಚರಿನವರಲ್ಲ... ಇವರು ನಮ್ಮವರೇ ಅಂದುಕೊಳ್ಳುವಷ್ಟರಲ್ಲಿ..."ಮುಂಗಾರು ಮಳೆಯೇ..... ಏನು ನಿನ್ನ ಹನಿಗಳ ಲೀಲೆ.." ಅರೆ... ಇದೇನಿದು... ಇಲ್ಲಿ ಗ್ಯಾಲಾಕ್ಸಿಯ ಯಾವುದೋ ಮೂಲೆಯಲ್ಲಿ ಕನ್ನಡ ಹಾಡು....?? ಮಲಯಾಳಿಗಳು ಬಂದು ಟಿ ಅಂಗಡಿ ಇಟ್ಟಿದ್ದಾರೆಂದರೂ ಒಪ್ಪಬಹುದೆನೊ ಆದರೆ ಈ ಕನ್ನಡಿಗರು ಇಲ್ಲಿ..?? ನನ್ನ ಸಂತೋಷಕ್ಕೆ ಪಾರವೇ ಇಲ್ಲ.. ಕೊನೆಗೊ ಕಂಡುಹಿಡಿದು ಬಿಟ್ಟೆ.. ಯಾ...ಹೂ... ಎಂದು ಅಲ್ಲಿಂದ ಜಿಗಿದವನೇ ನೇರವಾಗಿ ಮಂಚದಿಂದ ನೆಲಕ್ಕೆ ಬಿದ್ದಿದ್ದೆ. ಕಣ್ಣು ಬಿಟ್ಟು ನೋಡಿದಾಗ... ನನ್ನ ಮೊಬೈಲಿನಲ್ಲಿ ಸೆಟ್ ಮಾಡಿದ್ದ ಮುಂಗಾರು ಮಳೆಯ ಅಲಾರಮ್ ಹಾಡುತ್ತಿದೆ.
ಎದ್ದು ಬಾತ್‍ರೂಮಿಗೆ ಹೋಗಿ ಕಮೋಡಿನಲ್ಲಿ ಕೂತಾಗ ಈ ಅರ್ಥವಿಲ್ಲದ ಕನಸಿನ ಬಗ್ಗೆ ಯೋಚಿಸತೊಡಗಿದೆ. ಗ್ಯಾಲಾಕ್ಸಿಯಲ್ಲಿ ಸೌರಮಂಡಲ, ಅದರಲ್ಲಿ ಭೂಮಿ, ಭೂಮಿಯಲ್ಲಿ ಸಮುದ್ರ, ಅದರಲ್ಲೊಂದು ದ್ವೀಪ, ದ್ವೀಪದಲ್ಲೊಂದು ಉದ್ಯಾನವನ, ಉದ್ಯಾನವನದಲ್ಲೊಂದು ಗಿಡ, ಆ ಗಿಡದಲ್ಲೊಂದು ಎಲೆ, ಆ ಎಲೆಯ ಮೇಲೊಂದು ಹಕ್ಕಿ, ಹಕ್ಕಿಯ ಕೊಕ್ಕಿನಲ್ಲಿ ಚಿಟ್ಟೆಯ ಪ್ರಾಣ, ಆ ಚಿಟ್ಟೆಯ ಅಣುಗಳಲ್ಲಿ ಆತಂಕ, ಅದನ್ನು ನಾನು ನೋಡುತ್ತಿರುವುದು ಸೂಕ್ಷ್ಮದರ್ಶಕದಲ್ಲಿ. ಅಬ್ಬಾ.. ಎಲ್ಲಿಂದ ಎಲ್ಲಿಗೆ ನನ್ನ ಯಾನ..?
ತಲೆಬುಡವಿಲ್ಲದ ಈ ಕನಸಿಗೆ ಎನೊಂದೂ ಅರ್ಥವಿಲ್ಲವೆನಿಸಿದರೂ....ಆ ಬಣ್ಣದ ಚಿಟ್ಟೆಯಂತೆ ನಮ್ಮ ಬದುಕು, ಎಷ್ಟೇ ಸುಂದರವಾಗಿದ್ದರೂ ಒಂದು ದಿನ ಅಂತಿಮ ಹೋರಾಟವಿದೆಯೆಂಬುದನ್ನು ಮರೆತು... ನಾನು, ನನ್ನದು, ಬೇಕು, ಇನ್ನೂ ಬೇಕೆನ್ನುತ್ತಾ, ಹೊಡೆದಾಡಿ ಕೊಂಡಿರುವ ನಾವುಗಳು ಪ್ರಕೃತಿಯ ಅನಂತ ವಿಶ್ವದಲ್ಲೊಂದು ಸಣ್ಣ ಅಣು ಸಮಾನರೆಂದು ನನ್ನನ್ನು (ಈಗ ನಿಮ್ಮನ್ನೂ ಕೂಡ) ಎಚ್ಚರಿಸುತ್ತಿರಬಹುದೆ..???